ಸಮಗ್ರ ನ್ಯೂಸ್: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಅವರು ಲೋಕಾಯುಕ್ತ ಬಲೆಗೆ ಬಿದ್ದಿರುವ ಪ್ರಕರಣವೀಗ ಬಸವರಾಜ ಬೊಮ್ಮಾಯಿ ಅವರಿಗೆ ತಲೆನೋವಾಗಿ ಪರಿಣಮಿಸಿದೆ.
ರಾಜ್ಯದಲ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ 40 ಪರ್ಸೆಂಟ್ ಸರ್ಕಾರ ಎಂಬ ಬಿರುದು ಬಿಜೆಪಿ ಸರ್ಕಾರವನ್ನು ಬಾಧಿಸುತ್ತಿದೆ. ಇದರ ಬೆನ್ನಲ್ಲೇ, ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹಾಂಡ್ ಆಗಿ ಸಿಕ್ಕಿಬಿದ್ದಿರುವುದು ಮುಜುಗರ ತಂದಿದೆ. ಹಾಗಾಗಿ, ಬಸವರಾಜ ಬೊಮ್ಮಾಯಿ ಅವರು ಗುಪ್ತಚರ ಇಲಾಖೆಗಳ ಅಧಿಕಾರಿಗಳಿಂದ ಲೋಕಾಯುಕ್ತ ದಾಳಿ ಕುರಿತು ಮಾಹಿತಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲಾ ಪ್ರವಾಸ ಮುಗಿಸಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ಆರ್.ಟಿ. ನಗರದ ನಿವಾಸಕ್ಕೆ ಆಗಮಿಸುತ್ತಲೇ, ಗುಪ್ತಚರ ಇಲಾಖೆ ಎಡಿಜಿಪಿ ದಯಾನಂದ್ ಅವರು ಬೊಮ್ಮಾಯಿ ನಿವಾಸಕ್ಕೆ ತೆರಳಿದ್ದಾರೆ. ಇದೇ ವೇಳೆ, ಲೋಕಾಯುಕ್ತ ಅಧಿಕಾರಿಗಳ ದಾಳಿ, ಅಲ್ಲಿ ಸಿಕ್ಕಿರುವ ಹಣ, ಮುಂದಿನ ಪ್ರಕ್ರಿಯೆಗಳ ಕುರಿತು ಮಾಹಿತಿ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆಯಿಂದ ಅಲರ್ಟ್ ಕಾಂಗ್ರೆಸ್ ಆಗಿದ್ದು ಬಿಜೆಪಿ ಭ್ರಷ್ಟಾಚಾರಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ಭ್ರಷ್ಟಾಚಾರ ತಡೆಯುವ ನಿಟ್ಟಿನಲ್ಲಿಯೇ ಲೋಕಾಯುಕ್ತ ರಚನೆ ಮಾಡಲಾಗಿದೆ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಹಿಂದೆ ಲೋಕಾಯುಕ್ತ ಇಲ್ಲದೇ ಕಾಂಗ್ರೆಸ್ ಕಾಲದ ಕೇಸ್ ಗಳು ಮುಚ್ಚಿ ಹೋಗಿದ್ದವು. ಕಾಂಗ್ರೆಸ್ ಶಾಸಕರ ಮೇಲೂ ಹಲವು ಆರೋಪಗಳಿದ್ದವು. ಅವೆಲ್ಲವನ್ನೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮುಚ್ಚಿ ಹಾಕಲಾಗಿತ್ತು. ಈ ಎಲ್ಲಾ ಕೇಸ್ ಗಳ ತನಿಖೆ ಆಗಲಿ. ಲೋಕಾಯುಕ್ತ ಸರ್ವಸ್ವತಂತ್ರವಾಗಿ ತನಿಖೆ ನಡೆಸಲಿ ಎಂದು ಸಿಎಂ ಹೇಳಿದರು.







