ಸಮಗ್ರ ನ್ಯೂಸ್: ಬಿಜೆಪಿ ಮುಖಂಡರೊಬ್ಬರು ಸ್ವಪಕ್ಷೀಯ ಕಾರ್ಯಕರ್ತನನ್ನು ಅಟ್ಟಾಡಿಸಿಕೊಂಡು ಹೊಡೆದಿರುವಂತಹ ಘಟನೆ ನಿನ್ನೆ(ಜ.25) ಅರಸೀಕೆರೆಯಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಅರಸೀಕೆರೆ ಪೊಲೀಸರಿಂದ ಬಿಜೆಪಿ ಘಟಕದ ಉಪಾಧ್ಯಕ್ಷ ವಿಜಯ್ ಕುಮಾರ್ ಹಾಗೂ ಕಾರು ಚಾಲಕನನ್ನು ಬಂಧಿಸಿದ್ದಾರೆ. ಕೊಲೆ ಯತ್ನ ಆರೋಪದಡಿ ಐಪಿಸಿ ಸೆಕ್ಷನ್ 307ರಡಿ ಕೇಸ್ ದಾಖಲು ಮಾಡಲಾಗಿದೆ.
ನಿನ್ನೆ(ಜ.25) ಸಂಜೆ ನಡುರಸ್ತೆಯಲ್ಲಿ ಬಿಜೆಪಿ ಕಾರ್ಯಕರ್ತ ಕುಮಾರ್ ಮೇಲೆ ದೊಣ್ಣೆಯಿಂದ ವಿಜಯ್ ಕುಮಾರ್ ಮಾರಣಾಂತಿಕ ಹಲ್ಲೆ ಮಾಡಿದ್ದ. ಬಿಜೆಪಿ ಕಾರ್ಯಕರ್ತ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳು ಕುಮಾರ್ಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅರಸೀಕೆರೆ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಿಜೆಪಿಯ ಬೂತ್ ವಿಜಯ್ ಅಭಿಯಾನ ಕಾರ್ಯಕ್ರಮದಲ್ಲಿ ತಮಗೆ ಅವಮಾನ ಮಾಡಿದ್ದಾನೆಂದು ವಿಜಯ್ ಕುಮಾರ್ ತನ್ನ ಕಾರು ಚಾಲಕನ ಜೊತೆ ಸೇರಿಕೊಂಡು ಕುಮಾರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು.
ವರ್ಷದ ಹಿಂದೆ ಬಿಜೆಪಿ ಸಮಾವೇಶದ ವೇಳೆ ಬಿಜೆಪಿ ಅರಸೀಕೆರೆ ಬಿಜೆಪಿ ಟಿಕೇಟ್ ಆಕಾಂಕ್ಷಿ ಎನ್.ಆರ್.ಸಂತೋಷ್ ಹಾಗೂ ವಿಜಯ್ ಕುಮಾರ್ ಬಣದ ನಡುವೆ ಗಲಾಟೆ ನಡೆದಿತ್ತು. ಹಲ್ಲೆಗೊಳಗಾದ ಕುಮಾರ್ ಎನ್.ಆರ್ ಸಂತೋಷ್ ಬಣದಲ್ಲಿ ಗುರುತಿಸಿಕೊಂಡಿದ್ದರು. ಅಲ್ಲದೇ ಇತ್ತೀಚೆಗೆ ಬಿಜೆಪಿಯ ಬೂತ್ ವಿಜಯ್ ಅಭಿಯಾನ ನಿಮಿತ್ತ ಗ್ರಾಮಗಳಿಗೆ ತೆರಳಿದ್ದ ವೇಳೆ ಕೆಲ ಜನರಿಂದ ವಿಜಯ್ ಕುಮಾರ್ಗೆ ಅವಮಾನವಾಗಿತ್ತು. ಆ ಘಟನೆ ವಿಡಿಯೋ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದ ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆಗಳಿಂದ ವಿಜಯ್ ಕುಮಾರ್ ಕುಪಿತಗೊಂಡು ನಿನ್ನೆ ಅರಸೀಕೆರೆ ನಗರಸಭೆ ಎದುರು ನೂರಾರು ಜನರ ಎದುರೇ ತಮ್ಮ ಕಾರು ಚಾಲಕನ ಜೊತೆ ಸೇರಿ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದರು. ಅರಸೀಕೆರೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ಕುಮಾರ್ ಅವರನ್ನು ಅರಸೀಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು.