ಸಮಗ್ರ ನ್ಯೂಸ್: ಹಿಂದೂ ಯುವ ಮುಖಂಡ ಪ್ರವೀಣ್ ಹತ್ಯೆಗೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬೆಳ್ಳಾರೆಯ ಶಫೀಕ್ ಹಾಗೂ ಸವಣೂರು ಮೂಲದ ಝಾಕಿರ್ ಎಂದು ಗುರುತಿಸಲಾಗಿದೆ. ಬಂಧಿತ ವ್ಯಕ್ತಿಗಳು ಪ್ರವೀಣ್ ಹತ್ಯೆಗೆ ಸ್ಕೆಚ್ ಹಾಕಿಕೊಟ್ಟವರು ಎಂದು ಹೇಳಲಾಗಿದೆ.
ಅಕ್ಷಯ ಚಿಕನ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿರುವ ಮಧು ರಾಯನ್ ಅವರು ನೀಡಿದ ದೂರಿನಂತೆ ಕೃತ್ಯವೆಸಗಿದ ಮೂವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಲಾಗಿತ್ತು.
ಎರಡೇ ದಿನದೊಳಗೆ ಪ್ರಮುಖರೆಂದು ಹೇಳಲಾಗುತ್ತಿರುವ ಶಂಕಿತರನ್ನು ಬಂಧಿಸಿದ್ದಾರೆ. ಬೆಳ್ಳಾರೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಈ ಮಾಹಿತಿ ತಿಳಿಸಿದ್ದಾರೆ.
ಜಾಕೀರ್ ಸವಣೂರು ಎಂಬಾತ ಈ ಹಿಂದೆಯೂ ಕೋಮು ಸಂಘರ್ಷದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಆರೋಪಿಗಳಿಬ್ಬರಿಗೂ ಪಿಎಫ್ಐ ಸಂಘಟನೆಗಳ ನಂಟು ಇದೆಯೇ ಇಲ್ಲವೋ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಆರೋಪಿಗಳಿಬ್ಬರನ್ನೂ ಕೇರಳ ಗಡಿ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಎಡಿಜಿಪಿ ಅಲೋಕ್ಕುಮಾರ್ರವರು ತಿಳಿಸಿದ್ದಾರೆ. ಕೃತ್ಯದಲ್ಲಿ ಇನ್ನು ಹಲವರ ಕೈವಾಡವಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸ್.ಪಿ. ಸೋನಾವಣೆ ತಿಳಿಸಿದ್ದಾರೆ.