ಸಮಗ್ರ ನ್ಯೂಸ್ : ಗೋವುಗಳನ್ನು ಸಾಗಿಸುತ್ತಿದ್ದ ಕಳ್ಳರನ್ನು ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸರು ಪತ್ತೆ ಹಿಡಿದ ಘಟನೆಯೊಂದು ಕಾರ್ಕಳದ ಹೆಬ್ರಿ ಕೆರೆಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ.
ಉಡುಪಿಯ ಮಲ್ಪೆ ಹೂಡೆಯಲ್ಲಿ ಅಕ್ರಮ ಕಸಾಯಿ ಖಾನೆ ನಡೆಸುತ್ತಿರುವ ಸಹೋದರರಾದ ಶಕೀಲ್ ಅಹಮದ್ ಮತ್ತು ಅಖಿಲ್ ಅಹಮದ್ ಬಂಧಿತ ಆರೋಪಿಗಳು.
ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ತಲ್ವಾರು ಹಿಡಿದು ದನ ಕದಿಯುತ್ತಿದ್ದ ಸಹೋದರರು ಬೇಳಂಜೆ ಗ್ರಾಮದ ಈಸ ಗದ್ದೆ ಎಂಬಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ಎರಡು ಜಾನುವಾರುಗಳನ್ನು ಕಳವು ಮಾಡಿ ಅವುಗಳನ್ನು ಕಾರಿನಲ್ಲಿ ತುಂಬಿಸಿ ಅವುಗಳಿಗೆ ಹಿಂಸೆಯಾಗುವ ರೀತಿಯಲ್ಲಿ ಸಾಗಿಸುತ್ತಿರುವಾಗ ಖಚಿತ ಮಾಹಿತಿಯ ಮೇರೆಗೆ ಹೆಬ್ರಿ ಪೊಲೀಸರು ಅವರನ್ನು ಸೆರೆಹಿಡಿದಿದ್ದಾರೆ.
ಈ ವೇಳೆ ಒಬ್ಬ ಕಾಡಿಗೆ ಓಡಿ ಪರಾರಿಯಾಗಿದ್ದಾನೆ.
ಹಾಗೆಯೇ ಸಿಕ್ಕಿಬಿದ್ದ ಮತ್ತೋಬ್ಬ ಆರೋಪಿ ಕಾರು ಚಾಲಕ ದನಗಳನ್ನು ಕೊಂಡು ಹೋಗಿ ವಧೆ ಮಾಡಿ ಕಸಾಯಿ ಖಾನೆಗೆ ಮಾರಾಟ ಮಾಡಲು ಹೋಗುತ್ತಿದ್ದೆವು ಎಂಬುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಗೋವುಗಳನ್ನು ಹಿಂಸಾತ್ಮಕವಾಗಿ ಕಾರಿಗೆ ತುಂಬಿಸಿದ ಪರಿಣಾಮ ದನದ ಕುತ್ತಿಗೆ ಮುರಿದು ಒಂದು ದನ ಸಾವಿಗೀಡಾಗಿದೆ.
ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.