ಸಮಗ್ರ ನ್ಯೂಸ್: ಅಗ್ನಿಪಥ್ ಯೋಜನೆಗೆ ಕಾಂಗ್ರೆಸ್ ನಾಯಕರ ಮಕ್ಕಳನ್ನು ಕೇಳಿಲ್ಲ ಎಂದಿದ್ದ ನಳಿನ್ ಕುಮಾರ್ ಹೇಳಿಕೆಗೆ ಕಿಡಿಕಾರಿರುವ ಮಾಜಿ ಸಚಿವ ರಮಾನಾಥ ರೈ, ನಳಿನ್ ಒಬ್ಬ ಹಾಸ್ಯಗಾರ, ಅವರ ಹೇಳಿಕೆಯನ್ನು ಗಂಭೀರ ಪರಿಗಣಿಸಲ್ಲ. ಡಾಲರ್ ರೇಟ್, ಹೊಯ್ಗೆ ದರದ ಬಗ್ಗೆ ಹೇಳಿ ಜನರ ನಡುವೆ ನಗೆಪಾಟಲಿಗೆ ಈಡಾಗಿದ್ದಾರೆ. ಕಾಂಗ್ರೆಸ್ ಮಕ್ಕಳ ವಿಚಾರ ಅಲ್ಲ, ನಾವು ದೇಶದ ಮಕ್ಕಳ ಬಗ್ಗೆ ಪ್ರಶ್ನೆ ಮಾಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ರಮಾನಾಥ ರೈ, ದೇಶಕ್ಕಾಗಿ ಹೋರಾಡಿದ ನಾಯಕರು ನಮ್ಮಲ್ಲಿ ಬಹಳಷ್ಟಿದ್ದಾರೆ. ಆದರೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ಇವರು ಅವಮಾನಿಸುತ್ತಿದ್ದಾರೆ. ಇವರು ನೆಹರು ಸೇರಿ ದೇಶದ ನಾಯಕರನ್ನು ಅವಮಾನಿಸಿದ್ದಾರೆ.
ಮಂಗಳೂರಿನ ನೆಹರು ಮೈದಾನಕ್ಕೆ ಕೇಂದ್ರ ಮೈದಾನ ಎಂದು ಬಿಜೆಪಿ ಹೇಳುತ್ತಿದೆ. ಅಲ್ಲಿಗೆ ಕೇಂದ್ರ ಮೈದಾನ ಎಂದು ಹೆಸರಿಟ್ಟಿದ್ದು ಬ್ರಿಟಿಷರು, ಅದನ್ನು ಬಿಜೆಪಿ ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಇವರು ಬ್ರಿಟಿಷರ ಪರವಾಗಿದ್ದರು ಅನ್ನೋದನ್ನು ತೋರಿಸುತ್ತಿದ್ದಾರೆ. ಇವರು ದೇಶಪ್ರೇಮಿಗಳೇ ಎಂದು ಪ್ರಶ್ನೆ ಮಾಡಿದ್ದಾರೆ.
ಜವಹರಲಾಲ್ ನೆಹರೂ 11 ವರ್ಷ ಜೈಲು ವಾಸ ಅನುಭವಿಸಿದ್ದಾರೆ. ನೆಹರು ಇಲ್ಲಿ ಬಂದು ಭಾಷಣ ಮಾಡಿದ್ದಕ್ಕಾಗಿ ಆ ಮೈದಾನಕ್ಕೆ ಆಗಿನ ನಾಯಕರಾದ ಶ್ರೀನಿವಾಸ ಮಲ್ಯ, ಕಿಲ್ಲೆಯಂತವರು ನೆಹರು ಮೈದಾನ ಎಂದು ಹೆಸರಿಟ್ಟಿದ್ದರು. ಆದರೆ ಬಿಜೆಪಿ ಮಂದಿ ಶ್ರೀನಿವಾಸ ಮಲ್ಯ, ಕಿಲ್ಲೆಯವರಿಗೆ ಅವಮಾನಿಸುತ್ತಿದ್ದಾರೆ. ಇವರಿಗೆ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ ಎಂದು ಮಾಜಿ ಸಚಿವ ರಮಾನಾಥ ರೈ ಪ್ರಶ್ನಿಸಿದರು.