ಸಮಗ್ರ ನ್ಯೂಸ್: ಯುವಕನೋರ್ವನ ಮೇಲೆ ಅಪರಿಚಿತರಿಂದ ಸುಳ್ಯದ ಮೊಗರ್ಪಣೆಯಲ್ಲಿ ಗುಂಡಿನ ದಾಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಸುಳ್ಯದ ಮೊಗರ್ಪಣೆ ಬಳಿಯ ವೆಂಕಟರಮಣ ಸೊಸೈಟಿಯ ಬಳಿ ಭಾನುವಾರ ರಾತ್ರಿ ಮಹಮ್ಮದ್ ಶಾಹಿ ಎಂಬಾತನ ಮೇಲೆ ಗುಂಡಿನ ದಾಳಿ ನಡೆದಿತ್ತು. ಆದರೆ ಅದೃಷ್ಟವಶಾತ್ ಗುಂಡು ಆತನ ಕಾರಿಗೆ ತಾಗಿದ ಹಿನ್ನೆಲೆಯಲ್ಲಿ ಶಾಹಿ ಅಪಾಯದಿಂದ ಪಾರಾಗಿದ್ದರು.
ಗಾಯಾಳುವಿನ ಹೇಳಿಕೆಯಂತೆ ಪ್ರಕರಣದ ಜಾಡುಹಿಡಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಡಿಎಸ್ಪಿ ಋಷಿಕೇಶ್ ಸೊನಾವಣೆ ಮಾರ್ಗದರ್ಶನದಲ್ಲಿ ಹೆಚ್ಚುವರಿ ಡಿಎಸ್ಪಿ ಕುಮಾರ್ ಚಂದ್ರ ನೇತೃತ್ವದ ತಂಡ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ ಸಹಕಾರದೊಂದಿಗೆ ಪ್ರಕರಣದ ತನಿಖೆ ನಡೆಸಿದ್ದು, ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಹಮ್ಮದ್ ಶಾಹಿ ಸುಳ್ಯದ ಮೊಗರ್ಪಣೆಯಲ್ಲಿ ತನ್ನ ತಂಗಿಯ ಮನೆಗೆ ಹೋಗಿ ಹಿಂತಿರುಗುವ ವೇಳೆ ಹಿಂದಿನಿಂದ ಸ್ಕಾರ್ಪಿಯೋದಲ್ಲಿ ಬಂದ ಅಪರಿಚಿತರ ತಂಡ ಗುಂಡಿನ ಸುರಿಮಳೆಗರೆದಿತ್ತು.