ಸುಳ್ಯ: ಅಕ್ರಮ ಸಹಿ ಸಂಗ್ರಹಿಸಿ ಮರ್ಕಂಜದಲ್ಲಿ ಅಕ್ರಮ ಗಣಿಗಾರಿಕೆ!
ದೇವಸ್ಥಾನ, ಮನೆ, ಶಾಲೆಯ ಕಟ್ಟಡಗಳಿಗೆ ತೊಂದರೆಯಾದರೂ ಅಧಿಕಾರಿಗಳ ದಿವ್ಯಮೌನ| ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿರುವ ಪುಟಾಣಿಗಳು|ಪಂಚಸ್ಥಾಪನೆಯ ಉಳಿವಿಗಾಗಿ ನಮ್ಮೊಂದಿಗೆ ಕೈಜೋಡಿಸಿ: ಗ್ರಾಮಸ್ಥರ ಅಳಲು

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದಲ್ಲಿ “ಡೆಲ್ಮಾ ಎಂಟರ್‌ಪ್ರೈಸಸ್’’ ಹೆಸರಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಯು ಅಕ್ರಮ ಸಹಿಗಳನ್ನು ಸಂಗ್ರಹಿಸಿ ಪರವಾನಿಗೆ ಪಡೆದಿರುವ ಆರೋಪ ಕೇಳಿಬಂದಿದೆ. ಗಣಿಗಾರಿಕೆಯಿಂದ ಸ್ಥಳೀಯ ದೇವಸ್ಥಾನ, ಶಾಲೆ, ಮತ್ತು ಮನೆಗೆಳ ಕಟ್ಟಡಗಳಿಗೆ ತೊಂದರೆ ಉಂಟಾಗುತ್ತಿದ್ದು ಗ್ರಾಮಸ್ಥರು ಇದೀಗ ಸರ್ಕಾರಿ ಕಚೇರಿಗಳ ಕದ ತಟ್ಟುತ್ತಿದ್ದಾರೆ.

Ad Widget ... ..

ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ” ಡೆಲ್ಮಾ ಎಂಟರ್‌ಪ್ರೈಸಸ್ ” ಹೆಸರಿನ ಅಕ್ರಮ ಕಲ್ಲುಕೋರೆ ಕೆಲಸ ನಡೆಯುತ್ತಿರುವುದು ಈಗಾಗಲೇ ಸುದ್ದಿಯಲ್ಲಿದೆ. ಈ ಕಲ್ಲು ಕೋರೆ ನಡೆಸಲು ಅಸುಪಾಸಿನ ಜನರ ಮತ್ತು ಗ್ರಾಮಸ್ಥರ ಅಕ್ರಮ ಸಹಿಗಳನ್ನು ಸಂಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಪರವಾನಿಗೆಯನ್ನು ಪಡೆದಿರುವ ಬಗ್ಗೆ ದೂರು ಕೇಳಿಬಂದಿದೆ. ಅದರೆ ಈಗಾಗಲೇ ಕಲ್ಲುಕೋರೆಯ ಪರವಾನಿಗೆಯ ಅವಧಿ ಮುಗಿದರೂ ಅಕ್ರಮವಾಗಿ ಮಾಡುತ್ತಿದ್ದಾರೆ ಮತ್ತು ಪರವಾನಿಗೆಯಲ್ಲಿ ಇರುವಂತಹ ಕೆಲವೊಂದು ವಿಚಾರಗಳು ಸುಳ್ಳು ದಾಖಲೆಯಾಗಿರುತ್ತದೆ ಎಂದು ಹೇಳಲಾಗಿದೆ.

Ad Widget

ಈ ಮೊದಲು ಪರವಾನಿಗೆ ಮಾಡುವ ಸಂದರ್ಭದಲ್ಲಿ ಸ್ಥಳೀಯ ದೇವಸ್ಥಾನದ ಆಡಳಿತ ಮಂಡಳಿ, ಸಂಘಸಂಸ್ಥೆಗಳ ಪ್ರಮುಖರ ಯಾವುದೇ ಅನುಮತಿಯನ್ನು ಪಡೆದುಕೊಂಡಿಲ್ಲ. ಮರ್ಕಂಜ ಗ್ರಾಮವು ಸುಳ್ಯ ತಾಲೂಕಿನಲ್ಲಿಯೇ ಪಂಚ ಸ್ಥಾಪನೆಯ ದೈವ ದೇವರುಗಳನ್ನು ಹೊಂದಿರುವ ಏಕೈಕ ಗ್ರಾಮವಾಗಿರುತ್ತದೆ.

ಅಳವುಪಾರೆ ಸಮೀಪ ಇರುವ ಮಿನುಂಗೂರು ದೇವಾಲಯಕ್ಕೆ ಹೋಗುವ ದಾರಿಯು ಅತೀ ಇಕ್ಕಟ್ಟಾದ ಮತ್ತು ಮಣ್ಣಿನ ದಾರಿಯಾಗಿದೆ. ಅದರೆ ಕೋರೆಯಿಂದ ಲಾರಿಗಳು ಇದೇ ಮಾರ್ಗದ ಮುಖಾಂತರ ನಿರಂತರವಾಗಿ ಮತ್ತು ಅತಿ ವೇಗವಾಗಿ ಕಲ್ಲನ್ನು ಮತ್ತು ಕಲ್ಲಿನ ಹುಡಿಯನ್ನು ಹೇರಿಕೊಂಡು ಹೋಗುತ್ತಿದೆ. ಇದರಿಂದ ಶಾಲಾ ಮಕ್ಕಳು, ಅಂಗನವಾಡಿಗೆ ಹೋಗುವ ಅತೀ ಚಿಕ್ಕ ಮಕ್ಕಳು, ಭಕ್ತಾದಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ದಾರಿ ನಡೆಯುವ ಪರಿಸ್ಥಿತಿ ಎದುರಾಗಿದೆ.

ಇದು ಅಲ್ಲದೇ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಡೂರು ಮರ್ಕಂಜದ ವಿದ್ಯಾರ್ಥಿಗಳು ಈ ದಾರಿಯ ಮೂಲಕವೇ ನಡೆದುಕೊಂಡು ಹೋಗುವ ಕಾರಣ ಮಕ್ಕಳ ಪೋಷಕರಲ್ಲಿಯೂ ಭಯದ ವಾತಾವರಣ ಉಂಟಾಗಿದೆ. ಜೊತೆಗೆ ದೇವಸ್ಥಾನಕ್ಕೆ ಹೋಗುವ ದಾರಿಯ ಬದಿಯಲ್ಲಿಯೇ ಕಲ್ಲು ಹುಡಿ ಮತ್ತು ದೂಳಿನಿಂದ ಕೂಡಿದ ಮಣ್ಣನ್ನು ಅತಿಯಾಗಿ ಸಂಗ್ರಹ ಮಾಡುವುದರಿಂದ ಪರಿಸರ ಮಾಲಿನ್ಯವಾಗಿ ಭಕ್ತಾದಿಗಳಿಗೆ ಸಂಚರಿಸಲು ಅನಾನುಕೂಲವಾಗಿದೆ. ವಿಷಪೂರಿತ ಧೂಳಿನಿಂದಾಗಿ ಆರೋಗ್ಯದ ಮೇಲೆ ತೀವ್ರವಾದ ಪರಿಣಾಮ ಬೀರಬಹುದು. ಇತ್ತೀಚಿನ ದಿನಗಳಲ್ಲಿ ಕಲ್ಲುಕೋರೆಯಲ್ಲಿ ಪರವಾನಿಗೆ ರಹಿತ ಅತೀ ಸ್ಫೋಟದಿಂದಾಗಿ ದೇವಸ್ಥಾನದ ಗರ್ಭಗುಡಿಯಲ್ಲಿ ಬಿರುಕುಬಿಟ್ಟಿದ್ದು , ಭಕ್ತಾದಿಗಳಲ್ಲಿ ಭಯದ ವಾತಾವರಣ ಉಂಟಾಗಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುತ್ತದೆ . ಇದರಿಂದಾಗಿ ದೇವಸ್ಥಾನದ ಸಂಬಂದಪಟ್ಟ ಮಂಡಳಿಗಳಿಗೂ ಸಂಧಿಘ ಪರಿಸ್ಥಿತಿ ಎದುರಾಗಿದೆ .

ಈ ಮೊದಲು ದೇವಸ್ಥಾನದ ಗರ್ಭಗುಡಿಯಲ್ಲಿ ಬಿರುಕುಬಿಟ್ಟಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸಹ ಅದರ ಬಗ್ಗೆ ಯಾವುದೇ ಕಾನೂನು ಕ್ರಮ ಕೈಗೊಂಡಿರುವುದಿಲ್ಲ ಮತ್ತು ಅದೇ ಮನವಿಯನ್ನು ದೇವಸ್ಥಾನದ ಕೆಲ ಸದಸ್ಯರು ಯಾರಿಗೂ ತಿಳಿಯದ ರೀತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಶಾಮೀಲಾಗಿ ಹಿಂಪಡೆದಿರಬೇಕೆಂದು ದೇವಸ್ಥಾನದ ಭಕ್ತಾದಿಗಳಲ್ಲಿ ಸಂಶಯ ಉಂಟಾಗಿದೆ. ಸದ್ರಿ ದೇವಸ್ಥಾನವು ಮಿನುಂಗೂರಿನ ತುತ್ತ ತುದಿಯಲ್ಲಿದ್ದು ಆ ಪ್ರದೇಶವು ಕಲ್ಲು ಬಂಡೆಗಳಿಂದ ಕೂಡಿದ ಪ್ರದೇಶವಾಗಿರುವುದರಿಂದ ಸದ್ರಿ ಕಲ್ಲು ಭೂಮಿಯು ಕೋರೆಯಲ್ಲಿ ನಡೆಯುವ ಅತಿ ಭೀಕರ ಸ್ಪೋಟದ ಪರಿಣಾಮವಾಗಿ ದೇವಸ್ಥಾನದ ಗರ್ಭ ಗುಡಿ ಕಂಪನಗೊಳ್ಳುವುದರಿಂದ ಹಾಗೂ ಇತರೆ ಕಟ್ಟಡಗಳು ಬಿರುಕುಬಿಟ್ಟಿರುತ್ತದೆ. ಮತ್ತು ಇದರಿಂದಾಗಿ ಅರ್ಚಕರಿಗೂ ಕೂಡ ಪೂಜೆ ಮಾಡಲು ಕಷ್ಟ ಸಾದ್ಯವಾಗಿದೆ. ಆದುದರಿಂದ ಸಂಬಂದ ಪಟ್ಟ ಅಧಿಕಾರಿಗಳು ಈ ಮೇಲ್ಕಂಡ ವಿಷಯವನ್ನು ಪರಿಗಣಿಸಿ ಆದಷ್ಟು ಬೇಗ ಸ್ಥಳಕ್ಕೆ ಆಗಮಿಸಿ ಭಕ್ತಾದಿಗಳಿಗೆ ಉಂಟಾಗುವ ಸಮಸ್ಯೆ ಮತ್ತು ದೇವಸ್ಥಾನಕ್ಕೆ ಉಂಟಾದ ಹಾನಿಯನ್ನು ಪರಿಶೀಲಿಸಬೇಕೆಂದು ಗ್ರಾಮಸ್ಥರು ವಿನಂತಿ ಮಾಡಿದ್ದಾರೆ.

ಇದು ಅಲ್ಲದೆ ಈ ಮೊದಲು ಸಲ್ಲಿಸಿದ ಅರ್ಜಿಯ ವಿಚಾರವನ್ನು, ಪರವಾನಿಗೆಯ ಅವಧಿ ಮುಗಿದಿದ್ದರೂ ಅಕ್ರಮವಾಗಿ ನಡೆಸುತ್ತಿರುವ ಕಲ್ಲು ಕೋರೆಯ ವಿರುದ್ಧ ನ್ಯಾಯಯುತವಾಗಿ ತನಿಖೆ ನಡೆಸಿ ಪಂಚಸ್ಥಾಪನೆಯ ಉಳಿವಿಗಾಗಿ ನಮ್ಮೊಂದಿಗೆ ಕೈಜೋಡಿಸಿ ನ್ಯಾಯ ಒದಗಿಸಿಕೊಡಬೇಕೆಂದು ದುರ್ಗಾಪರಮೇಶ್ವರಿ ಭಜನಾ ಮಂಡಳಿ ಮರ್ಕಂಜದ ಸದಸ್ಯರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಮರ್ಕಂಜ ಗ್ರಾಮದ ಜನತೆಗೆ ಗಣಿಗಾರಿಕೆಯಿಂದ ಮುಕ್ತಿ ದೊರಕಿಸಬೇಕಾಗಿದೆ. ಸಾರ್ವಜನಿಕರಿಗೆ, ಖಾಸಗಿ ಮತ್ತು ಸಾರ್ವಜನಿಕ ಆಸ್ತಿಗೆ ತೊಂದರೆ ಉಂಟುಮಾಡದಂತೆ ಹಾಗೂ ತೋಪು ಮತ್ತು ಅದರ ತೇವಾಂಶಕ್ಕೆ ಧಕ್ಕೆ ಬಾರದಂತೆ ಮತ್ತು ಅರಣ್ಯೀಕರಣ ಯೋಜನೆಗೆ ತೊಂದರೆಯಾಗದಂತೆ ಗಣಿಗಾರಿಕೆ ನಡೆಸುವ ಷರತ್ತಿಗೊಳಪಟ್ಟಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *