ನವದೆಹಲಿ: ಕೆಲ ದಿನಗಳ ಹಿಂದಷ್ಟೇ ಪೆಟ್ರೋಲ್ ಬೆಲೆ ಇಳಿಕೆಯಿಂದ ಕೊಂಚ ನಿರಾಳರಾಗಿರುವ ಶ್ರೀ ಸಾಮಾನ್ಯರಿಗೆ ಸದ್ಯದಲ್ಲೇ ಇನ್ನೊಂದು ಗುಡ್ ನ್ಯೂಸ್ ಕೇಳುವ ಅವಕಾಶವಿದೆ.
ಕೇಂದ್ರವು ತನ್ನ ಐದು ಮಿಲಿಯನ್ ಬ್ಯಾರಲ್ ಕಚ್ಚಾ ತೈಲ ಬಿಡುಗಡೆ ಮಾಡಲು ನಿರ್ಧರಿಸಿದ್ದು ಇದರಿಂದಾಗಿ ಮುಂಬರುವ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇನ್ನಷ್ಟು ಇಳಿಕೆ ಕಾಣುವ ನಿರೀಕ್ಷೆ ಇದೆ.
ದೆಹಲಿಯಲ್ಲಿ ನಡೆದ ಉನ್ನತ ಸಚಿವಾಲಯ ಹಾಗೂ ತೈಲ ಮಾರುಕಟ್ಟೆ ಕಂಪನಿಗಳ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ಅಮೆರಿಕ, ಚೀನಾ, ಜಪಾನ್ ಹಾಗೂ ದಕ್ಷಿಣ ಕೋರಿಯಾ ಸೇರಿದಂತೆ ಇತರೆ ಪ್ರಮುಖ ಜಾಗತಿಕ ಇಂಧನ ಗ್ರಾಹಕರ ಜೊತೆಯಲ್ಲಿ ಸಮಾಲೋಚನೆಯಲ್ಲಿ ಐದು ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಬಿಡುಗಡೆ ಮಾಡಲಾಗುತ್ತದೆ. ಕಚ್ಚಾ ತೈಲದ ಬೆಲೆಯನ್ನು ತಗ್ಗಿಸುವ ಸಲುವಾಗಿ ಅಮೆರಿಕವು ಪೆಟ್ರೋಲಿಯಂ ನಿಕ್ಷೇಪಗಳನ್ನು ಬಿಡುಗಡೆ ಮಾಡಲು ನಿರ್ಧಾರ ಕೈಗೊಂಡ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕಾರ್ಯತಂತ್ರವು ಸರಿಯಾದ ರೀತಿಯಲ್ಲಿ ಅನುಷ್ಟಾನಕ್ಕೆ ಬಂದಲ್ಲಿ ಇಂಧನಗಳ ಬೆಲೆಯಲ್ಲಿ ಇನ್ನಷ್ಟು ಇಳಿಕೆ ಕಂಡು ಬರಲಿದೆ. ಕೇಂದ್ರ ಸರ್ಕಾರವು ನವೆಂಬರ್ ಮೂರರಂದು ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಕ್ರಮವಾಗಿ ಐದು ಹಾಗೂ ಹತ್ತು ರೂಪಾಯಿ ಇಳಿಕೆ ಮಾಡಿತ್ತು.