ಸಮಗ್ರ ನ್ಯೂಸ್: ವಾಗಲೂ ಪಾಕಿಸ್ತಾನವನ್ನು ಶತ್ರು ರಾಷ್ಟ್ರ ಮತ್ತು ಭಯೋತ್ಪಾದನೆಯ ಕೇಂದ್ರ ಎಂದು ಕರೆಯುವ ಬಿಜೆಪಿ ಪಕ್ಷದ ನಾಯಕರೊಬ್ಬರು ಈಗ ಅದೇ ದೇಶದ ಪರವಾಗಿ ಬ್ಯಾಟ್ ಬೀಸಿರುವುದು ಅಚ್ಚರಿ ಮೂಡಿಸಿದೆ. ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ನಾವು ಪಾಕಿಸ್ತಾನದ ಪರವಾಗಿ ನಿಲ್ಲುತ್ತೇವೆ ಎಂದು ರಾಜಸ್ಥಾನ ಬಿಜೆಪಿ ರಾಜ್ಯಾಧ್ಯಕ್ಷ ಮದನ್ ರಾಥೋಡ್ ನೀಡಿರುವ ಹೇಳಿಕೆ ಈಗ ರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ.
ಮಾಜಿ ರಾಷ್ಟ್ರಪತಿ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮದನ್ ರಾಥೋಡ್ ಮಾತನಾಡುತ್ತಿದ್ದರು. ಈ ವೇಳೆ ಅವರು ಹಠಾತ್ತನೆ ಅಮೆರಿಕ ವಿರುದ್ಧದ ಯುದ್ಧದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುವ ಮಾತನಾಡಿದ್ದು ಎಲ್ಲರನ್ನು ಬೆಚ್ಚಿಬೀಳಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಪ್ರತಿಪಕ್ಷಗಳು ಬಿಜೆಪಿಯ ರಾಷ್ಟ್ರೀಯತೆಯ ಬುಡಕ್ಕೆ ಕೈ ಹಾಕಿವೆ.
ಕಾಂಗ್ರೆಸ್ ವಕ್ತಾರೆ ಶಮಾ ಮೊಹಮ್ಮದ್ ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ಸದಾ ಪಾಕಿಸ್ತಾನದ ವಿರುದ್ಧ ಗುಡುಗುವ ಮೋದಿಯವರು ಈಗ ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷರ ಹೇಳಿಕೆಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯ ದೇಶಭಕ್ತಿ ಕೇವಲ ರಾಜಕೀಯ ಲಾಭಕ್ಕಾಗಿ ಮಾತ್ರವೇ? ಪಾಕಿಸ್ತಾನದ ಪರ ಮಾತನಾಡಿರುವ ಮದನ್ ರಾಥೋಡ್ ಮೇಲೆ ಅಮಿತ್ ಶಾ ಅವರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಕೇಳಿದ್ದಾರೆ. ಇತ್ತ ಆಮ್ ಆದ್ಮಿ ಪಾರ್ಟಿ ಕೂಡ ವ್ಯಂಗ್ಯವಾಡಿದ್ದು ಜನರನ್ನು ದೇಶದ್ರೋಹಿಗಳು ಎನ್ನುವ ಬಿಜೆಪಿಯವರೇ ಈಗ ಪಾಕಿಸ್ತಾನದ ಪರ ಘೋಷಣೆ ಕೂಗುತ್ತಿದ್ದಾರೆ ಎಂದು ಟೀಕಿಸಿದೆ.
ವಿವಾದ ತಾರಕಕ್ಕೇರುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಮದನ್ ರಾಥೋಡ್ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿದ್ದಾರೆ. ನಾನು ಮಾತನಾಡಿದ್ದು ದೇಶಗಳ ನಡುವಿನ ಸೈನ್ಯದ ಯುದ್ಧದ ಬಗ್ಗೆ ಅಲ್ಲ ಬದಲಿಗೆ ಕ್ರೀಡಾ ಯುದ್ಧದ ಬಗ್ಗೆ. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯ ನಡೆದಾಗ ನಾವು ನಮ್ಮ ದೇಶವನ್ನೇ ಬೆಂಬಲಿಸುತ್ತೇವೆ. ಆದರೆ ಅಮೆರಿಕ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆದರೆ ನಾವು ನೆರೆಹೊರೆಯ ಏಷ್ಯಾದ ತಂಡವಾಗಿ ಪಾಕಿಸ್ತಾನವನ್ನು ಬೆಂಬಲಿಸುವುದು ಕ್ರೀಡಾ ಮನೋಭಾವ ಎಂದು ನಾನು ಹೇಳಿದ್ದೆ. ವಿರೋಧ ಪಕ್ಷಗಳು ನನ್ನ ಮಾತನ್ನು ತಿರುಚಿ ಅಪಪ್ರಚಾರ ಮಾಡುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.









