ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ 2012ರಲ್ಲಿ ನಡೆದಿದ್ದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗಾಗಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವು (ಎಸ್ಐಟಿ) ಲಭ್ಯ ದಾಖಲೆಗಳ ಪರಿಶೀಲನಾ ಕಾರ್ಯ ಆರಂಭಿಸಿದೆ.
ಮಂಗಳೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿಯ ಎರಡನೇ ಮಹಡಿಯಲ್ಲಿ ಆರಂಭಿಸಲಾದ ಎಸ್ಐಟಿ ಕಚೇರಿಯಲ್ಲಿ ತಂಡದ ಮುಖ್ಯಸ್ಥ ಶಶಿಕುಮಾರ್ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳು ಮಂಗಳವಾರ ಮತ್ತು ಬುಧವಾರ ಸರಣಿ ಸಭೆಗಳನ್ನು ನಡೆಸಿದರು.
ತನಿಖೆಯ ಭಾಗವಾಗಿ ಎಸ್ಐಟಿಯ ತನಿಖಾಧಿಕಾರಿ ಎಸ್ಪಿ ಲೋಕೇಶ್ ಜಗಲಾಸರ್ ನೇತೃತ್ವದ ಅಧಿಕಾರಿಗಳ ತಂಡವು ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದಲ್ಲಿರುವ ಸೌಜನ್ಯಾ ಮನೆಗೆ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.









