ಸಮಗ್ರ ನ್ಯೂಸ್: ಕರಾವಳಿ ಕರ್ನಾಟಕದ ಸುಳ್ಯದ ನೆಲದಲ್ಲಿ ಬೆಳೆದು, ಅಮೆರಿಕದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಯಶಸ್ವಿ ವೃತ್ತಿಜೀವನ ನಡೆಸುತ್ತಿದ್ದ ಕಾರ್ತಿಕ್ ಸುಧೀರ್, ಇದೀಗ ಜಾಗತಿಕ ಅಲ್ಕೋ-ಬೆವ್ (Alco-Bev) ಉದ್ಯಮದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ತಂತ್ರಜ್ಞಾನ ಕ್ಷೇತ್ರ ತೊರೆದು ಸ್ಪಿರಿಟ್ಸ್ ಉದ್ಯಮಕ್ಕೆ ಧುಮುಕಿದ ಅವರು, 2017ರಲ್ಲಿ ಅಮೆರಿಕದಲ್ಲಿ ‘ಫಿನಾಮಿನಲ್ ಸ್ಪಿರಿಟ್ಸ್’ ಸಂಸ್ಥೆಯನ್ನು ಸ್ಥಾಪಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರ್ಯಾಂಡ್ ನಿರ್ಮಿಸಿದ್ದಾರೆ.
ಅಮೆರಿಕದ ಕೆಂಟಕಿಯಲ್ಲಿ ಡಿಸ್ಟಿಲೇಶನ್, ಬ್ಲೆಂಡಿಂಗ್ ಮತ್ತು ಕ್ಯಾಸ್ಕ್ ಮೆಚ್ಯುರೇಶನ್ ಕುರಿತು ಕಠಿಣ ಅಧ್ಯಯನ ನಡೆಸಿದ ಕಾರ್ತಿಕ್, ‘ರಾನ್ ಇಜಾಲ್ಕೊ ರಮ್’ (Ron Izalco Rum) ಮತ್ತು ‘RY3 ವಿಸ್ಕಿ’ (RY3 Whiskey) ಬ್ರ್ಯಾಂಡ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದರು. ಇವರು ತಯಾರಿಸಿದ 10 ವರ್ಷದ ರಾನ್ ಇಜಾಲ್ಕೊ ರಮ್ಗೆ ಸ್ಯಾನ್ ಫ್ರಾನ್ಸಿಸ್ಕೋ ವರ್ಲ್ಡ್ ಸ್ಪಿರಿಟ್ಸ್ ಕಾಂಪಿಟಿಷನ್ನಲ್ಲಿ ಗೋಲ್ಡ್ ಮೆಡಲ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.
‘ಬ್ಲೆಂಡರ್ ಫಸ್ಟ್’ ಎಂಬ ವಿಶಿಷ್ಟ ಪರಿಕಲ್ಪನೆಯೊಂದಿಗೆ ಸಿಗಾರ್ ಸೀರೀಸ್ ಹಾಗೂ ಓಲ್ಡ್ ಫ್ಯಾಷನ್ಡ್ ಕಾಕ್ಟೇಲ್ಗಳನ್ನು ಸಹ ಇವರು ಅಭಿವೃದ್ಧಿಪಡಿಸಿದ್ದಾರೆ.ಅಮೆರಿಕ ಹಾಗೂ ಯುರೋಪಿಯನ್ ಮಾರುಕಟ್ಟೆಗಳಲ್ಲಿ ಭಾರಿ ಯಶಸ್ಸು ಕಂಡ ಬಳಿಕ, ಕಾರ್ತಿಕ್ ಸುಧೀರ್ ಅವರು ತಮ್ಮ ಪ್ರೀಮಿಯಂ ಬ್ರ್ಯಾಂಡ್ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದ್ದಾರೆ.
ಮೊದಲ ಹಂತದಲ್ಲಿ ಬೆಂಗಳೂರು, ಮುಂಬೈ, ದೆಹಲಿ, ಗೋವಾ ಮತ್ತು ಹೈದರಾಬಾದ್ಗಳಂತಹ ಪ್ರಮುಖ ನಗರಗಳ ಮೂಲಕ ತಮ್ಮ ಉತ್ಪನ್ನಗಳನ್ನು ಹಂತ ಹಂತವಾಗಿ ಭಾರತದ ಮದ್ಯಪ್ರಿಯರಿಗೆ ತಲುಪಿಸಲು ಯೋಜನೆ ರೂಪಿಸಿದ್ದಾರೆ.









