ಸಮಗ್ರ ನ್ಯೂಸ್: 2026ರ ಮಹಿಳಾ ಟಿ20 ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ತನ್ನ ಅಜೇಯ ಓಟವನ್ನು ಮುಂದುವರಿಸಿದ್ದು, ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 40 ರನ್‌ಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿದೆ. ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳು ಗಮನ ಸೆಳೆದವು.
ಟಾಸ್ ಗೆದ್ದ ಬಾಂಗ್ಲಾದೇಶ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳಾ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 149 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಈ ಮೊತ್ತಕ್ಕೆ ಪ್ರಮುಖ ಕೊಡುಗೆ ನೀಡಿದ್ದು ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ.
ಭಾರತದ ಆರಂಭ ನಿರೀಕ್ಷೆಯಂತೆ ಇರಲಿಲ್ಲ. ಅನುಭವಿ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಕೇವಲ 2 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಮತ್ತೊಂದೆಡೆ ಶಫಾಲಿ ವರ್ಮಾ ಬಾಂಗ್ಲಾ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿ ಆಟವಾಡಿದರು. ನಾಲ್ಕು ಜೀವದಾನಗಳ ಲಾಭ ಪಡೆದ ಶಫಾಲಿ ಕೇವಲ 40 ಎಸೆತಗಳಲ್ಲಿ 64 ರನ್ ಸಿಡಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್‌ಗಳಿದ್ದವು. 160ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರು ಭಾರತದ ಮೊತ್ತವನ್ನು 150ರ ಸನಿಹಕ್ಕೆ ಕೊಂಡೊಯ್ದರು.
ಶಫಾಲಿಗೆ ಪ್ರತಿಕಾ ರಾವಲ್ ಉತ್ತಮ ಸಾಥ್ ನೀಡಿದ್ದು, 24 ಎಸೆತಗಳಲ್ಲಿ 20 ರನ್ ಗಳಿಸಿದರು. ಬಳಿಕ ರಿಚಾ ಘೋಷ್ 16 ಎಸೆತಗಳಲ್ಲಿ 21 ರನ್ ಸಿಡಿಸಿದರೆ, ದೀಪ್ತಿ ಶರ್ಮಾ ಕೇವಲ 6 ಎಸೆತಗಳಲ್ಲಿ 13 ರನ್ ಕಲೆಹಾಕಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ್ದು, 28 ಎಸೆತಗಳಲ್ಲಿ 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 24 ರನ್ ಗಳಿಸಿದರು.
150 ರನ್‌ಗಳ ಗುರಿ ಬೆನ್ನಟ್ಟಿದ ಬಾಂಗ್ಲಾದೇಶಕ್ಕೆ ಆರಂಭದಿಂದಲೇ ಭಾರತದ ಬೌಲರ್‌ಗಳು ಕಡಿವಾಣ ಹಾಕಿದರು. ಜುವೈರಿಯಾ ಫಿರ್ದೋಸ್ 14 ರನ್, ದಿಲಾರಾ ಅಖ್ತರ್ 21 ರನ್, ಸೋಭಾನಾ ಮೊಸ್ತರಿ 18 ರನ್ ಹಾಗೂ ನಾಯಕಿ ನಿಗರ್ ಸುಲ್ತಾನಾ 19 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಾಂಗ್ಲಾದೇಶದ ಅಗ್ರ ಕ್ರಮಾಂಕದ ಆಟಗಾರ್ತಿಯರು ಎರಡಂಕಿ ಮೊತ್ತ ತಲುಪಿದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾದರು.
ಅಂತಿಮವಾಗಿ ಬಾಂಗ್ಲಾದೇಶ 20 ಓವರ್‌ಗಳಲ್ಲಿ 109 ರನ್‌ಗಳಿಗೆ ಆಲೌಟ್ ಆಗಿ 40 ರನ್‌ಗಳ ಸೋಲು ಕಂಡಿತು. ಭಾರತದ ಪರ ದೀಪ್ತಿ ಶರ್ಮಾ ಅದ್ಭುತ ಬೌಲಿಂಗ್ ಪ್ರದರ್ಶಿಸಿ 3 ವಿಕೆಟ್ ಕಬಳಿಸಿದರು. ಪರಿಣಾಮವಾಗಿ ಭಾರತ ಸುಲಭ ಗೆಲುವು ದಾಖಲಿಸಿ ಅಜೇಯ ತಂಡವಾಗಿ ಏಷ್ಯಾಕಪ್ ಫೈನಲ್‌ಗೆ ಲಗ್ಗೆ ಇಟ್ಟಿದೆ.










