ಕರಾವಳಿಯಲ್ಲಿ ಬೆಂಕಿ‌ ಹಚ್ಚಲು RSS ನಂತೆ ಸುರೇಶ್ ಭಟ್, ಗೌರಿ ಲಂಕೇಶ್ ಕೂಡಾ ಕಾರಣ‌ – ಲಕ್ಷ್ಮೀಶ ಗಬ್ಲಡ್ಕ

ಸಮಗ್ರ ನ್ಯೂಸ್: “ಸುರೇಶ್‌ ಭಟ್ ಬಾಕ್ರಬೈಲು ಕೋಮು ಸೌಹಾರ್ದತೆ ಹೆಸರಿನಲ್ಲಿ ‌ಅಪನಂಬಿಕೆ ಹೆಚ್ಚಿಸಲು ಕಾರಣರಾದ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಕರಾವಳಿಯ ಬೆಂಕಿ ಹಚ್ಚಲು ಸಂಘ ಪರಿವಾರದ ಕೆಲವು ಮಂದಿ ಹೇಗೆ ಕಾರಣರೋ ಅದೇ ರೀತಿ ಗೌರಿ ಲಂಕೇಶ್, ಸುರೇಶ್ ಭಟ್ ಕೂಡಾ ಕಾರಣರು.” ಎಂದು ಕಾಂಗ್ರೆಸ್ ಮುಖಂಡ, ಧಾರ್ಮಿಕ ದತ್ತಿ ಇಲಾಖೆಯ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಅಭಿಪ್ರಾಯಪಟ್ಟಿದ್ದಾರೆ.

Ad Widget ... .. Ad Widget .

ಗೌರಿ ಲಂಕೇಶ್ ಕರ್ನಾಟಕದ ಹಿರಿಯ ಪತ್ರಕರ್ತೆ ಹಾಗು ಕೋಮುವಾದ ವಿರೋಧಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಸಾಮಾಜಿಕ ಹೋರಾಟಗಾರ್ತಿ. ಆರೆಸ್ಸೆಸ್ ಹಾಗು ಅದರ ವಿಚಾರ ಧಾರೆಯನ್ನು ಕಟುವಾಗಿ ವಿರೋಧಿಸುತ್ತಿದ್ದ ಗೌರಿ ಲಂಕೇಶ್ ಮತಾಂಧರಿಂದ ಕೊಲೆಯಾದವರು. ಸುರೇಶ್ ಭಟ್ ಬಾಕ್ರಬೈಲ್ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಹೋರಾಟಗಾರ, ಲೇಖಕ, ಸಾಮಾಜಿಕ ಕಾರ್ಯಕರ್ತ. ಸಮಾಜದಲ್ಲಿ ಸೌಹಾರ್ದಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದವರು ಎಂದೇ ಅವರನ್ನು ಎಲ್ಲರೂ ಗೌರವಿಸುತ್ತಾರೆ. ಅಂತಹ ಗೌರಿ ಲಂಕೇಶ್ ಹಾಗು ಸುರೇಶ್ ಭಟ್ ರನ್ನು ಆರೆಸ್ಸೆಸ್ ಹಾಗು ಸಂಘ ಪರಿವಾರದ ನಾಯಕರು, ಕಟ್ಟಾ ಬೆಂಬಲಿಗರು ವಿರೋಧಿಸುತ್ತಾರೆ. ಅವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ದ್ವೇಷದ ಮಾತಾಡುತ್ತಾರೆ, ಅವಹೇಳನ ಮಾಡುತ್ತಾರೆ. ಆದರೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮುಖಂಡ ಲಕ್ಷ್ಮೀಶ ಗಬ್ಲಡ್ಕ ಅವರು ಗೌರಿ ಲಂಕೇಶ್ ಹಾಗು ಸುರೇಶ ಭಟ್ ಬಾಕ್ರಬೈಲು ಕರಾವಳಿಗೆ ಬೆಂಕಿ ಹಚ್ಚಲು ಸಂಘ ಪರಿವಾರದ ಹಾಗೇ ಕಾರಣರು ಎಂದು ಫೇಸ್ ಬುಕ್ ನಲ್ಲಿ ಬರೆದು ಅಚ್ಚರಿ ಮೂಡಿಸಿದ್ದಾರೆ.

Ad Widget

ಲೇಖಕ ಇಸ್ಮತ್ ಪಜೀರ್ ಅವರು ಸುರೇಶ್ ಭಟ್ ಅವರನ್ನು ಭೇಟಿಯಾದ ಕುರಿತು ಸೋಮವಾರ ಹಾಕಿದ ಫೇಸ್ ಬುಕ್ ಪೋಸ್ಟ್ ಕೆಳಗೆ ಲಕ್ಷ್ಮೀಶ ಗಬ್ಲಡ್ಕ ಈ ರೀತಿ ಕಮೆಂಟ್ ಮಾಡಿದ್ದಾರೆ.

ಲಕ್ಷ್ಮೀಶ್ ಗಬ್ಲಡ್ಕ ಅವರು ಸಂಘ ಪರಿವಾರದಿಂದಲೇ ಬಂದವರು. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದವರು. ಈಗ ಅವರು ಸಂಘ ಪರಿವಾರದವರ ಧಾಟಿಯಲ್ಲೇ ಗೌರಿ ಲಂಕೇಶ್ ಹಾಗು ಸುರೇಶ್ ಭಟ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಕೋಮು ಸೌಹಾರ್ದ ಹಾಗು ಜಾತ್ಯತೀತ ತತ್ವಗಳಿಗಾಗಿ ಹೋರಾಡುತ್ತಾ ಅದಕ್ಕಾಗಿ ಜೀವವನ್ನೇ ತೆತ್ತ ಗೌರಿ ಲಂಕೇಶ್ ರನ್ನೇ ಲಕ್ಷ್ಮೀಶ ಗಬ್ಲಡ್ಕ ಅವರು ಕರಾವಳಿಗೆ ಬೆಂಕಿ ಹಚ್ಚಲು ಕಾರಣರು ಎಂದು ದೂರಿದ್ದಾರೆ. ಅದೇ ರೀತಿ ಸುರೇಶ್ ಭಟ್ ಅವರ ಮೇಲೂ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಇಸ್ಮತ್ ಪಜೀರ್ ಅಲ್ಲೇ ಪ್ರತಿಕ್ರಿಯೆ ನೀಡಿ ಆಕ್ಷೇಪಿಸಿದಾಗ ಲಕ್ಷ್ಮೀಶ ಗಬ್ಲಡ್ಕ ಮತ್ತೊಮ್ಮೆ ಪ್ರತಿಕ್ರಿಯಿಸಿ “ಸುರೇಶ್ ಭಟ್ಟರ ಕುರಿತು ನಿಮಗೆ ಇರುವ ಗೌರವ ಆದರಗಳ ಬಗ್ಗೆ ನನಗೆ ತಕರಾರು ಇಲ್ಲ. ನಿಮ್ಮ ಅನುಭವ ನಿಮಗೆ ಸತ್ಯ ಹೇಗೆಯೋ.. ಹಾಗೇ..ಸಮಾಜದ ಎಲ್ಲಾ ವರ್ಗಗಳ ಜೊತೆ ನಿರಂತರ ಒಡನಾಡುವ ನನ್ನ ಅನುಭವ ಭಟ್ಟರ ಕುರಿತು ಹೀಗೇ ಉಂಟು. ಕರಾವಳಿಯ ಬೆಂಕಿ ಹೆಚ್ಚಲು ಸಂಘ ಪರಿವಾರದ ಕೆಲವು ಮಂದಿ ಹೇಗೆ ಕಾರಣರೋ ಅದೇ ರೀತಿ ಗೌರಿ ಲಂಕೇಶ್, ಸುರೇಶ್ ಭಟ್ ಕೂಡಾ ಕಾರಣರು. ನನ್ನ ಧರ್ಮವನ್ನು ಬೇ​.​….. ಧರ್ಮ ಅಂತ ಹೇಳಿದ ಗೌರಿ ಲಂಕೇಶ್ ಅವರ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದ ಸುರೇಶ್ ಭಟ್. ಅವರ ಬರಹ ಮಾತುಗಳು ನಾನು ಓದುತ್ತಾ ಇದ್ದೆ. ಕೇಳುತ್ತಾ ಇದ್ದೆ.ಎಂದಿಗೂ ಅವರಲ್ಲಿ ಎಲ್ಲಾ ಮತ ಧರ್ಮದ ಹೆಸರಿನಲ್ಲಿ ಇರುವ, ನಡೆಯುವ ಅಪದ್ಧಗಳ ಕುರಿತು ಸಮದೃಷ್ಟಿಯ ವಿಶ್ಲೇಷಣೆ ಹೊಂದಿರಲೇ ಇಲ್ಲ.

ಧರ್ಮ ಆಚರಣೆಯ ಮೂಲಕ ಪಡೆಯಬಹುದಾದ ಅನುಭೂತಿ ಹೊಂದದೆ. ಧಾರ್ಮಿಕರಾಗದೆ ಮತ್ತು ತಮ್ಮ ಆಲೋಚನೆಗೆ ಹೊಂದುವ ವಿಚಾರಗಳನ್ನು ಮಾತ್ರ ಆಯ್ಕೆ ಮಾಡಿ ಧರ್ಮವನ್ನು ಕೆಟ್ಟದಾಗಿ ವಿಡಂಬನೆ ಮಾಡುವ ಯಾವುದೇ ವ್ಯಕ್ತಿ ಸಮಾಜದ ಹಿತಚಿಂತಕ ಆಗಿರುವುದಿಲ್ಲ. ಇದು ನನ್ನ ದೃಢ ನಿಲುವು​”​ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *