ಸಮಗ್ರ ನ್ಯೂಸ್: ಟೀಮ್ ಇಂಡಿಯಾ ಐರ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದು, ಎರಡು ಟಿ ಟ್ವೆಂಟಿ ಪಂದ್ಯಗಳನ್ನು ಆಡುತ್ತಿದೆ. ನಿನ್ನೆ ( ಜೂನ್ 26 ) ಬೆಲ್‌ಫಾಸ್ಟ್‌ನ ಸಿವಿಲ್ ಸರ್ವಿಸ್ ಕ್ರಿಕೆಟ್ ಕ್ಲಬ್‌ನಲ್ಲಿ ನಡೆದ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಐರ್ಲೆಂಡ್ ಭಾರತವನ್ನು ಮಣಿಸಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯವನ್ನು ಗೆದ್ದ ಐತಿಹಾಸಿಕ ದಾಖಲೆ ಬರೆದಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬೌಲಿಂಗ್ ಆರಿಸಿಕೊಂಡು ಐರ್ಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಐರ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 182 ರನ್ ದಾಖಲಿಸುವ ಮೂಲಕ ಭಾರತಕ್ಕೆ 183 ರನ್‌ಗಳ ಗುರಿಯನ್ನು ನೀಡಿತು. ಆದರೆ ಭಾರತ 18.5 ಓವರ್‌ಗಳಲ್ಲಿ 148 ರನ್‌ಗಳಿಗೆ ಆಲ್‌ಔಟ್ ಆಯಿತು. ಈ ಮೂಲಕ ಐರ್ಲೆಂಡ್ 34 ರನ್‌ಗಳ ಜಯ ದಾಖಲಿಸಿ ಇತಿಹಾಸ ಬರೆಯಿತು.
ಐರ್ಲೆಂಡ್ ಇನ್ನಿಂಗ್ಸ್: ತಂಡ ಉತ್ತಮ ಆರಂಭವನ್ನೇನೂ ಪಡೆದುಕೊಳ್ಳಲಿಲ್ಲ. ಕೇವಲ 30 ರನ್‌ಗೆ 3 ವಿಕೆಟ್ ಕಳೆದುಕೊಂಡಿತು. ರಾಸ್ ಅಡೈರ್ 12 ರನ್ ಗಳಿಸಿದರೆ, ಟಿಮ್ ಟೆಕ್ಟರ್ 17 ರನ್ ಗಳಿಸಿದರು ಹಾಗೂ ಹ್ಯಾರಿ ಟೆಕ್ಟರ್ ಡಕ್‌ಔಟ್ ಆದರು. ಬಳಿಕ ನಾಯಕ ಲಾರ್ಕನ್ ಟಕ್ಕರ್ 50 ಹಾಗೂ ಗೆರೆತ್ ಡಿಲಾನಿ 49 ರನ್ ಗಳಿಸಿ ತಂಡ ಉತ್ತಮ ರನ್ ಗಳಿಸುವಲ್ಲಿ ನೆರವಾದರು. ಇನ್ನುಳಿದಂತೆ ಬೆಂಜಮಿನ್ ಕಾಲಿಟ್ಜ್ ಜಾರ್ಜ್ ಡಾಕ್ರೆಲ್ 19, ಲಿಯಾಮ್ ಮೆಗ್ರಾಥಿ 7, ಮ್ಯಾಥ್ಯೂ ಹಂಫ್ರೈಸ್ 2 ಹಾಗೂ ಜೈ ಮೂಂದ್ರ ಅಜೇಯ 2 ರನ್ ಗಳಿಸಿದರು.
ಹರ್ಷಿತ್ ರಾಣಾ ಮೂರು ವಿಕೆಟ್ ಪಡೆದರೆ, ಅಕ್ಸರ್ ಪಟೇಲ್ ಎರಡು ವಿಕೆಟ್, ಅರ್ಷ್‌ದೀಪ್ ಸಿಂಗ್ ಎರಡು ವಿಕೆಟ್ ಹಾಗೂ ಶಿವಮ್ ದುಬೆ ಒಂದು ವಿಕೆಟ್ ಪಡೆದರು.
ಭಾರತದ ಇನ್ನಿಂಗ್ಸ್: ಐರ್ಲೆಂಡ್ ಬೌಲಿಂಗ್ ದಾಳಿಗೆ ನಲುಗಿದ ಭಾರತದ ಪರ ಅಭಿಷೇಕ್ ಶರ್ಮಾ ಹಾಗೂ ಶಿವಮ್ ದುಬೆ ಹೊರತುಪಡಿಸಿ ಉಳಿದ ಯಾವ ಆಟಗಾರನೂ ಸಹ 20ರ ಗಡಿ ದಾಟಲಿಲ್ಲ. ಅಭಿಷೇಕ್ ಶರ್ಮಾ 49 ರನ್ ಗಳಿಸಿದರೆ, ಸಂಜು ಸ್ಯಾಮ್ಸನ್ 5, ಇಶಾನ್ ಕಿಶನ್ 1, ನಾಯಕ ಶ್ರೇಯಸ್ ಐಯ್ಯರ್ 3, ತಿಲಕ್ ವರ್ಮಾ 19, ವಾಷಿಂಗ್ಟನ್ ಸುಂದರ್ 9, ಶಿವಮ್ ದುಬೆ 25, ಅಕ್ಸರ್ ಪಟೇಲ್ 15, ಹರ್ಷಿತ್ ರಾಣಾ 8, ಅರ್ಷ್‌ದೀಪ್ ಸಿಂಗ್ 2 ಹಾಗೂ ಪ್ರಸಿದ್ಧ್ ಕೃಷ್ಣ ಅಜೇಯ 1 ರನ್ ಗಳಿಸಿದರು.
ಐರ್ಲೆಂಡ್ ಪರ ಮ್ಯಾಥ್ಯೂ ಹಂಫ್ರೇಯ್ಸ್ ಹಾಗೂ ಮ್ಯಾಥ್ಯೂ ಹಾಲರ್ಡ್ ತಲಾ ಮೂರು ವಿಕೆಟ್ ಪಡೆದರೆ, ಜೈ ಮೂಂದ್ರಾ ಎರಡು ವಿಕೆಟ್, ಲಿಯಾಮ್ ಮೆಗ್ರಾಥಿ ಹಾಗೂ ಗಾರೆಥ್ ಡಿಲಾನ್ ತಲಾ ಒಂದೊಂದು ವಿಕೆಟ್ ಪಡೆದರು.







