ಸಮಗ್ರ ನ್ಯೂಸ್: ಪತ್ನಿಯನ್ನು ಕೊಂದು ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶನಿವಾರ ಅಪರಾಹ್ನ ಕಡಬ ಠಾಣಾ ವ್ಯಾಪ್ತಿಯ ಆಲಂಕಾರು ಎಂಬಲ್ಲಿ ನಡೆದಿದೆ.
ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದ ಮೂಲತಃ ಕಾರ್ಕಳ ಬಜಗೋಳಿ ನಿವಾಸಿ ದಿನೇಶ್ ಹಾಗೂ ಸಿದ್ದಕಟ್ಟೆಯ ಸಂಗೀತಾ ದಂಪತಿಯು ಆಲಂಕಾರು ಕಜೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಶನಿವಾರದಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಪತ್ನಿಯನ್ನು ಕೊಂದು ಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಈ ದಂಪತಿಗೆ ಎರಡು ವರ್ಷದ ಹೆಣ್ಣು ಮಗುವೊಂದಿದೆ. ಒಂದು ತಿಂಗಳ ಹಿಂದಷ್ಟೇ ಆಲಂಕಾರಿನಲ್ಲಿ ನಡೆಸುತ್ತಿದ್ದ ಹೋಟೆಲನ್ನು ಬಿಟ್ಟು ತೆರಳಿದ್ದ ಇವರು ಶುಕ್ರವಾರದಂದು ಅಲಂಕಾರಿನ ಕಜೆಯ ಬಾಡಿಗೆ ಮನೆಗೆ ಪುನಃ ಬಂದಿದ್ದರು. ಜೂ.20ರಂದು ಘಟನೆ ನಡೆದಿದ್ದು, ಮನೆಯ ಒಳಗಿನ ಚಿಲಕ ಹಾಕಲಾಗಿತ್ತು. ಅಪ್ಪ – ಅಮ್ಮನ ಮೃತ ಶರೀರದ ಜೊತೆಗೆ ಮಗು ಅನಾಥವಾಗಿರುವ ದೃಶ್ಯ ಮನಕಲಕುವಂತಿತ್ತು.
ಸ್ಥಳಕ್ಕೆ ಕಡಬ ಪೊಲೀಸ್ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.








