ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತುಹಾಕಲಾಗಿದೆ ಎನ್ನಲಾದ ಪ್ರಕರಣ ಸಂಬಂಧ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿರುವ ಸಾಕ್ಷಿ ದೂರುದಾರ ಚಿನ್ನ ಸಿ.ಎನ್. ಅಲಿಯಾಸ್ ಚಿನ್ನಯ್ಯ, ತನ್ನ ಮೇಲೆ ಮತ್ತು ಕುಟುಂಬದವರ ಮೇಲೆ ಬೆದರಿಕೆ ಒಡ್ಡುವ ಹಾಗೂ ಮಾನಸಿಕ ಒತ್ತಡ ಹೇರುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ದೂರು ಸಲ್ಲಿಸಿದ್ದಾರೆ.
‘ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಜೂ 8ರಂದು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು ತನಿಖೆಯನ್ನು ಚುರುಕುಗೊಳಿಸಿ ಅಂತಿಮ ವರದಿ ಸಲ್ಲಿಸುವಂತೆಯೂ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟೆಣ್ಣನವರ, ವಿಠ್ಠಲ ಗೌಡ, ಜಯಂತ್ ಟಿ. ಮತ್ತು ಸುಜಾತಾ ಭಟ್ ಮತ್ತು ಕೆಲವು ಯುಟ್ಯೂಬರ್‌ಗಳ ಮೇಲೆ ಕ್ರಮ ಕೈಗೊಳ್ಳುವಂತೆ ಕೋರಿದ್ದೆ. ತನಿಖೆ ಮತ್ತು ಒಟ್ಟಾರೆ ಸ್ಥಿತಿಗತಿಯ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿಗಳು ಎಸ್‌ಐಟಿಗೆ ಸೂಚಿಸಿದ್ದಾರೆ. ಇದರ ನಂತರ ಆರೋಪಿಗಳು ಚುರುಕಾಗಿದ್ದಾರೆ. ಆರೋಪಿಗಳು ನನ್ನ ಕುಟುಂಬ ಸದಸ್ಯರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಲು ಮತ್ತು ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ’ ಎಂದು ಚಿನ್ನಯ್ಯ ಆರೋಪಿಸಿದ್ದಾರೆ.
‘ಜೂನ್ 12ರಂದು ರಾತ್ರಿ ಚಾನೆಲ್ ಒಂದರ ಹೆಸರು ಹೇಳಿ ಅಭಿಷೇಕ್ ಎಂಬಾತ ನನ್ನ ಸಂಬಂಧಿಕರಿಗೆ ಕರೆ ಮಾಡಿ ರಿಟ್ ಅರ್ಜಿಯ ಬಗ್ಗೆ ವಿವರಗಳನ್ನು ಕೇಳಿದ್ದಾನೆ. ಆತನ ಮಾತಿನಲ್ಲಿ ಬೆದರಿಕೆ ಮತ್ತು ಒತ್ತಡದ ಧ್ವನಿ ಇತ್ತು. ಅಂದು ರಾತ್ರಿ ಗಿರೀಶ್ ಮಟ್ಟೆಣ್ಣನವರ ಕೂಡ ಸಂಬಂಧಿಕರಿಗೆ ಕರೆ ಮಾಡಿ ಕುಟುಂಬದವರ ಮೇಲೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡಿದ್ದಾರೆ. ರಿಟ್ ಅರ್ಜಿಯನ್ನು ಹಿಂದಕ್ಕೆ ಪಡೆಯಲು ಪ್ರೇರೇಪಿಸುವ ಸಂಚು ಇದರ ಹಿಂದೆ ಇತ್ತು ಎಂಬ ಸಂದೇಹ ಇದೆ. ಇದೆಲ್ಲದರ ನಂತರ ಕುಟುಂಬ ಸದಸ್ಯರು ಆತಂಕಗೊಂಡಿದ್ದಾರೆ. ಆದ್ದರಿಂದ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು ನನ್ನ ಕುಟುಂಬ ಸದಸ್ಯರಿಗೆ ಭದ್ರತೆ ಒದಗಿಸಬೇಕು’ ಎಂದು ಚಿನ್ನಯ್ಯ ಕೋರಿದ್ದಾರೆ.








