ಧರ್ಮಸ್ಥಳ ಬುರುಡೆ ಪ್ರಕರಣ| ನಟ ಪ್ರಕಾಶ್ ರಾಜ್ ಹೆಸರು ಉಲ್ಲೇಖಿಸಿದ ಚಿನ್ನಯ್ಯ

ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮದ ಬಹುಚರ್ಚಿತ “ಬುರುಡೆ ಕೇಸ್” ಪ್ರಕರಣಕ್ಕೆ ಈಗ ಅತ್ಯಂತ ಸ್ಫೋಟಕ ತಿರುವು ಸಿಕ್ಕಿದೆ. ಈ ಇಡೀ ಪ್ರಕರಣವು ಧರ್ಮಸ್ಥಳ ಕ್ಷೇತ್ರ ಮತ್ತು ಹೆಗ್ಗಡೆಯವರ ವಿರುದ್ಧ ನಡೆದ ದೊಡ್ಡ ಮಟ್ಟದ ಪಿತೂರಿ ಎಂದು ಆರೋಪಿಸಿ, ಪ್ರಕರಣದ ಪ್ರಮುಖ ವ್ಯಕ್ತಿ ಚಿನ್ನಯ್ಯ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾನೆ.

Ad Widget ... .. Ad Widget .

ವಿಶೇಷವೆಂದರೆ, ಈ ಅರ್ಜಿಯಲ್ಲಿ ಆತ ಬಹುಭಾಷಾ ನಟ ಪ್ರಕಾಶ್ ರಾಜ್ ಸೇರಿದಂತೆ ಹಲವು ಪ್ರಮುಖರ ಹೆಸರುಗಳನ್ನು ಬಹಿರಂಗಪಡಿಸಿದ್ದು, ಇದು ಕರಾವಳಿ ಹಾಗೂ ರಾಜ್ಯ
ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ.

Ad Widget

ತನ್ನನ್ನು ದಾಳವಾಗಿ ಬಳಸಿಕೊಂಡು ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ ರೂಪಿಸಲಾಗಿತ್ತು ಎಂದು ಚಿನ್ನಯ್ಯ ತನ್ನ ಅರ್ಜಿಯಲ್ಲಿ ಗಂಭೀರ ಆರೋಪ ಮಾಡಿದ್ದಾನೆ. ಈ ಹಿಂದೆ ಧರ್ಮಸ್ಥಳದಲ್ಲಿ ಸಾವಿರಾರು ಶವಗಳನ್ನು ದಫನ್ ಮಾಡಲಾಗಿದೆ ಎಂದು ಸುಳ್ಳು ಹೇಳುವಂತೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್ ಹಾಗೂ ವಿಠಲ್ ಗೌಡ ಎಂಬುವವರು ತನಗೆ ಒತ್ತಾಯಿಸಿದ್ದರು ಎಂದು ಆತ ತಿಳಿಸಿದ್ದಾನೆ. ಅಲ್ಲದೆ, ಬೆಂಗಳೂರಿನ ಜಯಂತ್ ಎಂಬುವವರ ಮನೆಗೆ ಕರೆದೊಯ್ದು, ಕೈಯಲ್ಲಿ ತಲೆಬುರುಡೆ ಕೊಟ್ಟು ಫೋಟೋ ತೆಗೆಸಿಕೊಂಡಿದ್ದರು. ನಂತರ ವಕೀಲರ ಕಚೇರಿಯಲ್ಲಿ ಸಹಿ ಪಡೆದು, ಸುಪ್ರೀಂಕೋರ್ಟ್ ಮೆಟ್ಟಿಲೇರುವಂತೆ ಮಾಡಿದ್ದರು ಎಂದು ಚಿನ್ನಯ್ಯ ವಿವರಿಸಿದ್ದಾನೆ. ಈ ವೇಳೆ ತನಗೆ ಆಗಿಂದಾಗ್ಗೆ ಹಣದ ಆಮಿಷ ಒಡ್ಡಲಾಗಿತ್ತು ಮತ್ತು ಕೋರ್ಟ್‌ನಲ್ಲಿ ಹೇಳಿಕೆ ಬದಲಿಸಿದರೆ ಕೊಂದು ಹೂಳುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ಆತ ದೂರಿದ್ದಾನೆ.

ಇದೇ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ ಅವರ ಹೆಸರನ್ನು ಉಲ್ಲೇಖಿಸಿರುವ ಚಿನ್ನಯ್ಯ, ತಲೆಬುರುಡೆ ನೀಡಿ ಪೊಲೀಸರಿಗೆ ದೂರು ನೀಡಿದ ಬಳಿಕ ತನ್ನನ್ನು ಕೇರಳದ ರೆಸಾರ್ಟ್‌ಗೆ ಕರೆದೊಯ್ಯಲಾಗಿತ್ತು ಎಂದು ಹೇಳಿದ್ದಾನೆ. ಅಲ್ಲಿ ರಾತ್ರಿ ವೇಳೆ ನಟ ಪ್ರಕಾಶ್ ರಾಜ್ ಅವರು ತನಗೆ ಫೋನ್ ಮಾಡಿ, ಗಿರೀಶ್ ಮಟ್ಟಣ್ಣವರ್ ಹೇಳಿಕೊಟ್ಟಂತೆಯೇ ಹೇಳಿಕೆ ನೀಡಬೇಕು ಎಂದು ತಮಿಳಿನಲ್ಲಿ ಸೂಚಿಸಿದ್ದರು. ಅಲ್ಲದೆ ಈ ಯೋಜನೆಯ ಒಟ್ಟು ಬಜೆಟ್ 200 ಕೋಟಿ ರೂಪಾಯಿ ಆಗಿದ್ದು, ವೀರೇಂದ್ರ ಹೆಗ್ಗಡೆಯವರನ್ನು ಜೈಲಿಗೆ ಕಳುಹಿಸಲು ಸಹಕರಿಸಿದರೆ ತನಗೆ 50 ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಲಾಗಿತ್ತು ಎಂದು ಆತ ಅರ್ಜಿಯಲ್ಲಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾನೆ. ಆದರೆ, ಎಸ್‌ಐಟಿ (SIT) ಅಧಿಕಾರಿಗಳು ಜಾಗ ಪರಿಶೀಲಿಸಿದಾಗ ಅಲ್ಲಿ ಯಾವುದೇ ಶವದ ಅವಶೇಷಗಳು ಸಿಗದ ಕಾರಣ, ತಾನು ಭಯಗೊಂಡು ಸತ್ಯ ಹೇಳಲು ತೀರ್ಮಾನಿಸಿರುವುದಾಗಿ ಚಿನ್ನಯ್ಯ ಸ್ಪಷ್ಟಪಡಿಸಿದ್ದಾನೆ.

Leave a Comment

Your email address will not be published. Required fields are marked *