ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಘೋಷಣೆಯಾಗಿದ್ದ ದ್ವೈವಾರ್ಷಿಕ ಚುನಾವಣೆಯ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಾಲ್ಕೂ ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರಗಳನ್ನು ಹಿಂಪಡೆಯಲು ಇಂದು ಕಡೆಯ ದಿನವಾಗಿದ್ದು, ಕಣದಲ್ಲಿದ್ದ ಏಕೈಕ ಪಕ್ಷೇತರ ಅಭ್ಯರ್ಥಿಯ ನಾಮಪತ್ರ ತಾಂತ್ರಿಕ ಕಾರಣಗಳಿಂದಾಗಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಈ ಅವಿರೋಧ ಆಯ್ಕೆ ನಿಶ್ಚಿತವಾಗಿದೆ.
ಕಾಂಗ್ರೆಸ್ ಪಕ್ಷದ ಮೂವರು ಹಾಗೂ ಬಿಜೆಪಿಯ ಓರ್ವ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಅವಿರೋಧವಾಗಿ ಆಯ್ಕೆಯಾದ ನೂತನ ಸದಸ್ಯರು:
ಎಂ. ಮಲ್ಲಿಕಾರ್ಜುನ ಖರ್ಗೆ (ಕಾಂಗ್ರೆಸ್)
ಪವನ್ ಖೇರಾ (ಕಾಂಗ್ರೆಸ್)
ಮನ್ಸೂರ್ ಅಲಿಖಾನ್ (ಕಾಂಗ್ರೆಸ್)
ಎಂ. ನಾಗರಾಜ್ (ಬಿಜೆಪಿ)
ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಹೊರತಾಗಿ ಭೋಸರಾಜು ಸೋಮಯ್ಯ (ಭೋಜಣ್ಣ ಸೋಮಯ್ಯ) ಎಂಬುವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ನಾಮಪತ್ರ ಸಲ್ಲಿಸಿದ್ದರು. ಆದರೆ, ನಿಯಮಾವಳಿಗಳ ಪ್ರಕಾರ ಅಗತ್ಯವಿದ್ದ ಸೂಚಕರ ಸಹಿ ಇಲ್ಲದ ಕಾರಣ ಅವರ ನಾಮಪತ್ರ ಪರಿಶೀಲನೆ ವೇಳೆ ತಿರಸ್ಕೃತಗೊಂಡಿತ್ತು. ಇದರಿಂದಾಗಿ ಕಣದಲ್ಲಿ ಕೇವಲ ನಾಲ್ಕು ಸ್ಥಾನಗಳಿಗೆ ನಾಲ್ಕೇ ಅಭ್ಯರ್ಥಿಗಳು ಉಳಿದಂತಾಗಿದ್ದರಿಂದ ಮತದಾನದ ಅಗತ್ಯವಿಲ್ಲದೇ ಎಲ್ಲರೂ ಅವಿರೋಧವಾಗಿ ಜಯಗಳಿಸಿದ್ದಾರೆ.








