ಸಮಗ್ರ ನ್ಯೂಸ್: ವಿಶ್ವದ ಹವಾಮಾನ ವ್ಯವಸ್ಥೆಯನ್ನೇ ಏರುಪೇರು ಮಾಡುವ ‘ಎಲ್ ನಿನೋ’ (El Nino) ಹವಾಮಾನ ಪ್ರಕ್ರಿಯೆ ಪೆಸಿಫಿಕ್ ಮಹಾಸಾಗರದಲ್ಲಿ ಅಧಿಕೃತವಾಗಿ ಆರಂಭವಾಗಿದೆ ಎಂದು ಜಪಾನ್ ಹವಾಮಾನ ಇಲಾಖೆ ಘೋಷಿಸಿದೆ. ಈ ಪ್ರಕಟಣೆಯು ಭಾರತದ ರೈತರು ಹಾಗೂ ಹವಾಮಾನ ತಜ್ಞರಲ್ಲಿ ತೀವ್ರ ಆತಂಕ ಮೂಡಿಸಿದೆ.
ಸಾಮಾನ್ಯವಾಗಿ ಭಾರತದಲ್ಲಿ ಸುಡುವ ಬೇಸಿಗೆ ಮತ್ತು ದುರ್ಬಲ ಮುಂಗಾರು ಮಳೆಗೆ ಕಾರಣವಾಗುವ ಈ ಎಲ್ ನಿನೋ, ಈ ಬಾರಿ ಭಾರತದ ಕೃಷಿ ವಲಯದ ಮೇಲೆ ನೇರ ಪರಿಣಾಮ ಬೀರಲು ಹೊಂಚು ಹಾಕುತ್ತಿದೆ.
ಜಾಗತಿಕ ವಿಜ್ಞಾನಿಗಳ ಕಣ್ಣು ಪೆಸಿಫಿಕ್ ಸಾಗರದತ್ತ
ಪೆಸಿಫಿಕ್ ಮಹಾಸಾಗರದ ಮೇಲ್ಮೈ ಭಾಗದಲ್ಲಿನ ತಾಪಮಾನವು ನಿಗದಿತ ಮಿತಿಗಿಂತ ಹೆಚ್ಚಾಗಿದ್ದು, ವಾತಾವರಣದಲ್ಲೂ ಅದಕ್ಕೆ ಪೂರಕವಾದ ಬದಲಾವಣೆಗಳು ಕಾಣಿಸಿಕೊಂಡಿವೆ ಎಂದು ಜಪಾನ್ ವಿಜ್ಞಾನಿಗಳು ಧೃಡಪಡಿಸಿದ್ದಾರೆ. ಮತ್ತೊಂದೆಡೆ ಆಸ್ಟ್ರೇಲಿಯಾ ಹವಾಮಾನ ಇಲಾಖೆಯು ಪರಿಸ್ಥಿತಿ ತೀರಾ ಹತ್ತಿರದಲ್ಲಿದೆ ಎಂದು ಎಚ್ಚರಿಸಿದೆ. ಇನ್ನು ಭಾರತೀಯ ಹವಾಮಾನ ಇಲಾಖೆ (IMD) ಈ ಬಗ್ಗೆ ಇಷ್ಟರಲ್ಲೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಎಲ್ ನಿನೋ ಎಫೆಕ್ಟ್‌ನಿಂದಾಗಿ ಈ ಬಾರಿ ಭಾರತದ ಮುಂಗಾರು ಮಳೆ ಸರಾಸರಿಗಿಂತ ತೀರಾ ಕಡಿಮೆಯಾಗುವ ಮುನ್ಸೂಚನೆ ಸಿಕ್ಕಿದೆ. ಇಲಾಖೆಯು ತನ್ನ ಹಳೆಯ ಮುನ್ಸೂಚನೆಯನ್ನು ಬದಲಾಯಿಸಿದ್ದು, ಈ ಬಾರಿ ಶೇಕಡಾ 90 ರಷ್ಟು ಮಾತ್ರ ಮಳೆಯಾಗಬಹುದು ಎಂದು ಅಂದಾಜಿಸಿದೆ. ಅಷ್ಟೇ ಅಲ್ಲದೆ, ಶೇಕಡಾ 60 ರಷ್ಟು ಮಳೆ ಕೊರತೆಯಾಗುವ (Deficient Monsoon) ಆತಂಕಕಾರಿ ಮುನ್ಸೂಚನೆಯನ್ನೂ ನೀಡಲಾಗಿದೆ. ಈಗಾಗಲೇ ಕೇರಳಕ್ಕೆ ಮುಂಗಾರು ಪ್ರವೇಶ ತಡವಾಗಿದ್ದು, ಜೂನ್ ತಿಂಗಳ ಮಳೆ ಪ್ರಮಾಣ ತೀರಾ ಇಳಿಮುಖವಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳ ನಂತರ ಮಳೆ ಮತ್ತಷ್ಟು ಕುಂಠಿತವಾಗುವ ಸಾಧ್ಯತೆ ದಟ್ಟವಾಗಿದೆ.
ಭಾರತದಲ್ಲಿ ಶೇಕಡಾ 50 ರಷ್ಟು ಕೃಷಿ ಭೂಮಿ ಇಂದಿಗೂ ಯಾವುದೇ ಕೃತಕ ನೀರಾವರಿ ಸೌಲಭ್ಯವಿಲ್ಲದೆ ಕೇವಲ ಮಳೆಯನ್ನೇ ನೆಚ್ಚಿಕೊಂಡಿದೆ. ಮಳೆ ಕೈಕೊಟ್ಟರೆ ಇಡೀ ದೇಶದ ಆಹಾರ ಉತ್ಪಾದನೆಗೆ ಧಕ್ಕೆಯಾಗಲಿದೆ. ಇದರ ಜೊತೆಗೆ ದೇಶದ 91 ಪ್ರಮುಖ ಜಲಾಶಯಗಳು ತುಂಬಬೇಕಾದರೆ ಈ ಮುಂಗಾರು ಮಳೆಯೇ ಆಧಾರವಾಗಿದೆ.
ಜಲಾಶಯಗಳು ತುಂಬದಿದ್ದರೆ ಕುಡಿಯುವ ನೀರು ಮತ್ತು ಜಲವಿದ್ಯುತ್ ಉತ್ಪಾದನೆಗೆ ಭಾರಿ ಪೆಟ್ಟು ಬೀಳಲಿದೆ. ಇತ್ತೀಚೆಗಷ್ಟೇ ಜಾಗತಿಕ ಹವಾಮಾನ ಸಂಸ್ಥೆಗಳು ಇತಿಹಾಸದಲ್ಲೇ ಅತ್ಯಂತ ಗರಿಷ್ಠ ತಾಪಮಾನದ ಮೇ ತಿಂಗಳನ್ನು ದಾಖಲಿಸಿದ್ದು, ಈ ಬಿಸಿ ಈಗ ಭಾರತದ ಮುಂಗಾರಿಗೆ ಮುಳುವಾಗುವಂತೆ ಕಾಣುತ್ತಿದೆ.






