ಸಮಗ್ರ ನ್ಯೂಸ್: ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ತಮ್ಮ ಪಕ್ಷದ ಮೊದಲ ಪ್ರಮುಖ ಸಾರ್ವಜನಿಕ ಅಭಿಯಾನವನ್ನು ಅಧಿಕೃತವಾಗಿ ಪ್ರಾರಂಭಿಸಿದ್ದಾರೆ. ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಈ ಆನ್‌ಲೈನ್ ಅರ್ಜಿಯ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಈ ರಾಜಕೀಯ ಪಕ್ಷವು ಆರಂಭವಾದ ಕೆಲವೇ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡಿದ್ದು, ಫಾಲೋವರ್ಸ್ ಸಂಖ್ಯೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನೇ ಹಿಂದಿಕ್ಕಿ ವೈರಲ್ ಆಗಿದೆ. ಈ ಅಭಿಯಾನವನ್ನು ಎಲ್ಲಾ ಡಿಜಿಟಲ್ ವೇದಿಕೆಗಳಲ್ಲಿ ಅಧಿಕೃತವಾಗಿ ಪ್ರಕಟಿಸಿರುವ ದೀಪ್ಕೆ, ನೀಟ್ ವಿವಾದವು ಕೇವಲ ಪರೀಕ್ಷಾ ಬಿಕ್ಕಟ್ಟಲ್ಲ, ಬದಲಾಗಿ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ನಂಬಿಕೆಯನ್ನು ಛಿದ್ರಗೊಳಿಸಿದ ವ್ಯವಸ್ಥಿತ ವೈಫಲ್ಯ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇನ್‌ಸ್ಟಾಗ್ರಾಮ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಲಾದ ವಿಡಿಯೋ ಸಂದೇಶದಲ್ಲಿ, ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆ ಸಂಪೂರ್ಣವಾಗಿ ಕುಸಿದಿರುವುದನ್ನು ದೀಪ್ಕೆ ಎತ್ತಿ ತೋರಿಸಿದ್ದಾರೆ. ದೇಶಾದ್ಯಂತ ಇರುವ ಸಾರ್ವಜನಿಕರು ಈ ಆನ್‌ಲೈನ್ ಅರ್ಜಿಯನ್ನು ಬೆಂಬಲಿಸುವ ಮೂಲಕ ವ್ಯವಸ್ಥೆಯ ಮೇಲೆ ಒತ್ತಡ ಹೇರಬೇಕು ಮತ್ತು ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕೆಂದು ಕರೆ ನೀಡಿದ್ದಾರೆ.
ಪರೀಕ್ಷಾ ಪ್ರಕ್ರಿಯೆಯಲ್ಲಿನ ಇಂತಹ ದೊಡ್ಡ ದೋಷದಿಂದಾಗಿ ಇಷ್ಟೊಂದು ಅಗಾಧ ಸಂಖ್ಯೆಯ ವಿದ್ಯಾರ್ಥಿಗಳ ಭವಿಷ್ಯವನ್ನು ಅಪಾಯಕ್ಕೆ ತಳ್ಳಲಾಗಿದೆ ಎಂದು ದಿಪ್ಕೆ ಆಕ್ರೋಶ ಹೊರಹಾಕಿದ್ದಾರೆ.







