ಸಮಗ್ರ ನ್ಯೂಸ್: ಅಮೆರಿಕ ಮತ್ತು ನೈಜೀರಿಯಾದ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಐಸಿಸ್‌ನ ಮೋಸ್ಟ್ ವಾಂಟೆಡ್ ಉಗ್ರ, ಜಾಗತಿಕ ಕಮಾಂಡರ್‌ಗಳಲ್ಲಿ ಅಗ್ರ 2ನೇ ಸ್ಥಾನದಲ್ಲಿದ್ದ ಅಬು-ಬಿಲಾಲ್ ಅಲ್-ಮಿನುಕಿಯನ್ನು ಹತ್ಯೆಗೈಯ್ಯಲಾಗಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರೇ ಮಾಹಿತಿ ನೀಡಿದ್ದಾರೆ.
ನನ್ನ ನಿರ್ದೇಶನದ ಮೇರೆಗೆ ಅಮೆರಿಕದ ಧೈರ್ಯಶಾಲಿ ಸೇನಾ ಪಡೆಗಳು ಮತ್ತು ನೈಜೀರಿಯಾ ಸಶಸ್ತ್ರ ಪಡೆಗಳು ಅತ್ಯಂತ ಸಂಕೀರ್ಣ ಹಾಗೂ ಸೂಕ್ಷ್ಮವಾಗಿ ರೂಪಿಸಲಾದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿವೆ ಎಂದು ಹೇಳಿದ್ದಾರೆ.
ಅಬು-ಬಿಲಾಲ್ ಅಲ್-ಮಿನುಕಿ ಆಫ್ರಿಕಾದಲ್ಲಿ ಅಡಗಿ ಕುಳಿತಿದ್ದರೂ ನಾವು ಅವನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದೆವು. ಇನ್ನು ಆತ ಆಫ್ರಿಕಾ ಜನರನ್ನು ಭೀತಿಗೊಳಿಸುವುದಿಲ್ಲ ಅಥವಾ ಅಮೆರಿಕನ್ನರ ವಿರುದ್ಧದ ದಾಳಿಗಳಿಗೆ ಸಹಾಯ ಮಾಡುವುದಿಲ್ಲ. ಅವನ ಹತ್ಯೆಯಿಂದ ಐಸಿಸ್‌ನ ಜಾಗತಿಕ ಕಾರ್ಯಾಚರಣೆಗೆ ದೊಡ್ಡ ಹೊಡೆತ ಬಿದ್ದಿದೆ ಎಂದಿದ್ದಾರೆ.
ಅಲ್-ಮಿನುಕಿಯನ್ನು 2023ರಲ್ಲಿ ಅಮೆರಿಕ ಜಾಗತಿಕ ಉಗ್ರ ಪಟ್ಟಿಗೆ ಸೇರಿಸಿತ್ತು. ಆಫ್ರಿಕಾ ಖಂಡದಲ್ಲಿ ತಲೆಮರೆಸಿಕೊಂಡು ಸಂಘಟನೆಯ ಜಾಲವನ್ನು ವಿಸ್ತರಿಸಲು ಯತ್ನಿಸುತ್ತಿದ್ದ ಬಿಲಾಲ್, ಜಗತ್ತಿನಾದ್ಯಂತ ಐಸಿಸ್ ಜಾಲಕ್ಕೆ ಆರ್ಥಿಕ ನೆರವು ಮತ್ತು ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಒದಗಿಸುವ ಜವಾಬ್ದಾರಿ ಹೊತ್ತಿದ್ದ.







