ಸಮಗ್ರ ನ್ಯೂಸ್: ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಮಾತುಕತೆಯಲ್ಲಿ ಮಧ್ಯವರ್ತಿಯಾಗಿ ಪಾಕಿಸ್ತಾನದ ಪಾತ್ರದ ಬಗ್ಗೆ ಇರಾನ್‍ನ ಸಂಸದರು ಸಂದೇಹ ವ್ಯಕ್ತಪಡಿಸಿದ್ದು ಪಾಕಿಸ್ತಾನವು ಟ್ರಂಪ್ ಅವರ ಹಿತಾಸಕ್ತಿಯ ಪರವಿದೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನವು ಅಮೆರಿಕದ ಜನರ ಇಚ್ಛೆಗೆ ವಿರುದ್ಧವಾಗಿ ಒಂದು ಮಾತನ್ನೂ ಹೇಳುವುದಿಲ್ಲ. ಯಾವಾಗಲೂ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಹಿತಾಸಕ್ತಿಗೆ ಆದ್ಯತೆ ನೀಡುತ್ತದೆ ಎಂದು ಸಂಸದ ಹಾಗೂ ಇರಾನ್‍ನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಆಯೋಗದ ವಕ್ತಾರ ಇಬ್ರಾಹಿಂ ರೆಝಾಯಿ ಟೀಕಿಸಿದ್ದಾರೆ.
ಪಾಕಿಸ್ತಾನವು ಉತ್ತಮ ಸ್ನೇಹಿತ ಮತ್ತು ನೆರೆಹೊರೆಯವರಾಗಿದ್ದರೂ ಅದು ಮಧ್ಯಸ್ಥಿಕೆಗೆ ಅಗತ್ಯವಾದ ವಿಶ್ವಾಸಾರ್ಹತೆಯನ್ನು ಹೊಂದಿಲ್ಲ. ಪಾಕಿಸ್ತಾನವು ಮಾತುಕತೆಗೆ ಉತ್ತಮ ಮಧ್ಯವರ್ತಿಯಲ್ಲ. ಆರಂಭದಲ್ಲಿ ಅಮೆರಿಕವು ಇರಾನ್‍ನ ಪ್ರಸ್ತಾವನೆಯನ್ನು ಒಪ್ಪಿಕೊಂಡಿತ್ತು. ಆದರೆ ನಂತರ ತನ್ನ ಮಾತಿನಿಂದ ಹಿಂದೆ ಸರಿಯಿತು ಎಂದು ಜಗತ್ತಿಗೆ ಹೇಳಲು ಪಾಕಿಸ್ತಾನಕ್ಕೆ ಇಷ್ಟವಿರಲಿಲ್ಲ. ಲೆಬನಾನ್ ಹಾಗೂ ನಿರ್ಬಂಧಿಸಿದ ಸ್ವತ್ತುಗಳಂತಹ ವಿಷಯದಲ್ಲಿ ಅಮೆರಿಕ ತನ್ನ ಬದ್ಧತೆಯನ್ನು ಪೂರೈಸಲು ವಿಫಲವಾಗಿದೆ. ಮಧ್ಯವರ್ತಿ ಯಾವಾಗಲೂ ನಿಷ್ಪಕ್ಷಪಾತಿಯಾಗಿರಬೇಕು, ಯಾವಾಗಲೂ ಒಂದು ಕಡೆ ವಾಲಬಾರದು’ ಎಂದವರು `ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.







