ಸಮಗ್ರ ನ್ಯೂಸ್: ಭಾರತದ ಅತಿದೊಡ್ಡ ಸಾಫ್ಟ್‌ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ನಾಸಿಕ್ ಶಾಖೆಯಲ್ಲಿ ನಡೆದಿದೆ ಎನ್ನಲಾದ ಘಟನೆಗಳು ಇಡೀ ಐಟಿ ಲೋಕವನ್ನೇ ಬೆಚ್ಚಿಬೀಳಿಸಿವೆ. ಕೇವಲ ವೃತ್ತಿಪರ ಕೆಲಸಕ್ಕೆ ಸೀಮಿತವಾಗಬೇಕಿದ್ದ ಕಚೇರಿ ಆವರಣದಲ್ಲಿ ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ ಮತ್ತು ವ್ಯವಸ್ಥಿತ ಮತಾಂತರದ ಸಂಚು ನಡೆಯುತ್ತಿತ್ತು ಎಂಬ ಸ್ಫೋಟಕ ಮಾಹಿತಿ ತನಿಖೆಯಿಂದ ಹೊರಬಂದಿದೆ.
ಆರೋಪಿಗಳು ಹಿಂದೂ ಹುಡುಗಿಯರನ್ನು ಪ್ರೀತಿಸಿ ಮದುವೆಯಾಗುವಂತೆ ಪರಸ್ಪರ ಪ್ರಚೋದಿಸುತ್ತಿದ್ದರು ಮತ್ತು ಈ ಕೆಲಸಕ್ಕಾಗಿ ಅವರಿಗೆ ಹಣದ ಆಮಿಷ ಒಡ್ಡಲಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ಈ ಜಾಲಕ್ಕೆ ಕಂಪನಿಯ ಎಚ್‌ಆರ್ (HR) ಅಧಿಕಾರಿ ಕೂಡ ಸಾಥ್ ನೀಡುತ್ತಿದ್ದರು ಮತ್ತು ಅವರಿಗೂ ಹಣಕಾಸಿನ ನೆರವು ಸಿಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಸಂತ್ರಸ್ತೆಯರ ಮೇಲೆ ಧರ್ಮ ಬದಲಿಸುವಂತೆ ನಿರಂತರವಾಗಿ ಒತ್ತಡ ಹೇರಲಾಗುತ್ತಿತ್ತು ಎಂದು ಅವರು ವಿವರಿಸಿದ್ದಾರೆ. ಈ ಘಟನೆಯು ಕಾರ್ಪೊರೇಟ್ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದ್ದು, ತನಿಖೆ ಮುಂದುವರಿದಿದೆ.
ಈ ಪ್ರಕರಣದ ತನಿಖೆಗಾಗಿ ಮಹಾರಾಷ್ಟ್ರ ಪೊಲೀಸರು 12 ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದಾರೆ. ಇಲ್ಲಿಯವರೆಗೆ ಒಟ್ಟು 7 ಜನರನ್ನು ಬಂಧಿಸಲಾಗಿದೆ. ಇದರಲ್ಲಿ 6 ಜನರನ್ನು ನಾಸಿಕ್ ಕಚೇರಿಯಿಂದ ಮತ್ತು ಒಬ್ಬರನ್ನು ಪುಣೆಯಿಂದ ಬಂಧಿಸಲಾಗಿದೆ. ತೌಸಿಫ್ ಅತ್ತರ್ ಮತ್ತು ಅಶ್ವಿನಿ ಚೈನಾನಿ (ಆಪರೇಷನ್ಸ್ ಹೆಡ್) ಸೇರಿದಂತೆ ಪ್ರಮುಖರನ್ನು ಬಂಧಿಸಲಾಗಿದ್ದು, ನಿಡಾ ಖಾನ್ ಎಂಬುವವರು ಸದ್ಯ ತಲೆಮರೆಸಿಕೊಂಡಿದ್ದಾರೆ.
ಸಂತ್ರಸ್ತರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಒಟ್ಟು 9 ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಇವುಗಳಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವಂತಹ ಗಂಭೀರ ಕಲಂಗಳನ್ನು ಬಳಸಲಾಗಿದೆ.







