ಸಮಗ್ರ ನ್ಯೂಸ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿರುವ ಬೆನ್ನಲ್ಲೇ ಜಾಗತಿಕ ರಾಜಕೀಯ ಸಮೀಕರಣಗಳು ವೇಗವಾಗಿ ಬದಲಾಗುತ್ತಿವೆ. ಆಯಕಟ್ಟಿನ ಪ್ರದೇಶವಾದ ಹೋರ್ಮಝ್ ಜಲಸಂಧಿಯ ಮೇಲೆ ಹಿಡಿತ ಸಾಧಿಸಲು ಅಮೆರಿಕ ನಡೆಸುತ್ತಿರುವ ಪ್ರಯತ್ನಗಳಿಗೆ ಈಗ ಚೀನಾ ಬ್ರೇಕ್ ಹಾಕಲು ಮುಂದಾಗಿದೆ. ಇರಾನ್ಗೆ ತನ್ನ ಸಂಪೂರ್ಣ ಬೆಂಬಲ ಘೋಷಿಸುವ ಮೂಲಕ ಚೀನಾ, ಅಮೆರಿಕಕ್ಕೆ ನೇರ ಎಚ್ಚರಿಕೆ ನೀಡಿದೆ.
ವಿಶ್ವದ ಒಟ್ಟು ತೈಲ ವ್ಯಾಪಾರದ ಬಹುಪಾಲು ನಡೆಯುವ ಹೋರ್ಮಝ್ ಜಲಸಂಧಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅಮೆರಿಕ ನೌಕಾಪಡೆ ಸಜ್ಜಾಗುತ್ತಿದೆ ಎಂಬ ವರದಿಗಳಿದ್ದವು. ಇರಾನ್ ಮೇಲೆ ಒತ್ತಡ ಹೇರಲು ಅಮೆರಿಕ ಈ ತಂತ್ರ ಹೂಡಿತ್ತು. ಆದರೆ, ಇರಾನ್ ನ ಪರಮಾಪ್ತ ಮಿತ್ರ ರಾಷ್ಟ್ರವಾಗಿರುವ ಚೀನಾ ಈಗ ಬಹಿರಂಗವಾಗಿಯೇ ಅಖಾಡಕ್ಕಿಳಿದಿದೆ.
ಇರಾನ್ ನ ಆಂತರಿಕ ವಿಷಯಗಳಲ್ಲಿ ಮತ್ತು ಅದರ ಭದ್ರತಾ ವಿಚಾರಗಳಲ್ಲಿ ಯಾವುದೇ ಬಾಹ್ಯ ಶಕ್ತಿಗಳ ಹಸ್ತಕ್ಷೇಪವನ್ನು ಚೀನಾ ಖಂಡಿಸಿದೆ. ಚೀನಾಕ್ಕೆ ಇರಾನ್ ಅತಿ ದೊಡ್ಡ ತೈಲ ಪೂರೈಕೆದಾರ ರಾಷ್ಟ್ರವಾಗಿದೆ. ಹೋರ್ಮಝ್ ಮೇಲೆ ಅಮೆರಿಕ ಹಿಡಿತ ಸಾಧಿಸಿದರೆ ಚೀನಾದ ಇಂಧನ ಭದ್ರತೆಗೆ ಧಕ್ಕೆಯಾಗಲಿದೆ ಎಂಬುದು ಡ್ರ್ಯಾಗನ್ ರಾಷ್ಟ್ರದ ಆತಂಕ.
ಅವಶ್ಯಕತೆ ಬಿದ್ದಲ್ಲಿ ಇರಾನ್ ಭದ್ರತೆಗೆ ರಾಜತಾಂತ್ರಿಕ ಮತ್ತು ಆಯಕಟ್ಟಿನ ಬೆಂಬಲ ನೀಡುವುದಾಗಿ ಚೀನಾ ಭರವಸೆ ನೀಡಿದೆ. ಹಾರ್ಮೋಜ್ ಪ್ರದೇಶವು ಜಾಗತಿಕ ಆರ್ಥಿಕತೆಯ ನಾಡಿಮಿಡಿತವಿದ್ದಂತೆ. ಇಲ್ಲಿನ ಸಂಘರ್ಷ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರಲಿದೆ. ವಿಶ್ವದ ಶೇ. 20ರಷ್ಟು ಪೆಟ್ರೋಲಿಯಂ ಉತ್ಪನ್ನಗಳು ಈ ಕಿರಿದಾದ ಜಲಸಂಧಿಯ ಮೂಲಕವೇ ಸಾಗುತ್ತವೆ.
ಇಲ್ಲಿ ಅಲ್ಪ ಅಡಚಣೆಯಾದರೂ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೇರುತ್ತದೆ.ಏಷ್ಯಾ ಮತ್ತು ಯುರೋಪ್ ನಡುವಿನ ಪ್ರಮುಖ ವ್ಯಾಪಾರ ಕೊಂಡಿ ಇದಾಗಿದೆ.
ಚೀನಾದ ಈ ನಡೆ ಅಮೆರಿಕ ಮತ್ತು ಇರಾನ್ ನಡುವಿನ ಶೀತಲ ಸಮರವನ್ನು ಮತ್ತಷ್ಟು ತೀವ್ರಗೊಳಿಸಿದೆ. ಇದು ಕೇವಲ ಎರಡು ದೇಶಗಳ ನಡುವಿನ ಸಂಘರ್ಷವಾಗಿ ಉಳಿಯದೆ, ಶಕ್ತಿಶಾಲಿ ರಾಷ್ಟ್ರಗಳ ನಡುವಿನ ಜಿದ್ದಾಜಿದ್ದಿಗೆ ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.




























