ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಅಧಿಕೃತವಾಗಿ ಪ್ರಕಟಿಸಿದೆ. ಹೊಸ ವೇಳಾಪಟ್ಟಿಯಂತೆ ಮೇ 29, 2026 ರಿಂದ ಶಾಲೆಗಳು ಪುನರಾರಂಭಗೊಳ್ಳಲಿವೆ.
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು 2026-27ನೇ ಸಾಲಿನ ಶೈಕ್ಷಣಿಕ ವರ್ಷದ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮೇ 29ರಿಂದಲೇ ಶಾಲೆಗಳು ಪುನರಾರಂಭಗೊಳ್ಳಲಿವೆ. ಒಟ್ಟು 245 ದಿನಗಳ ಶಾಲಾ ಕರ್ತವ್ಯದ ಅವಧಿಯಲ್ಲಿ ದಸರಾ ಮತ್ತು ಬೇಸಿಗೆ ರಜೆಯ ದಿನಾಂಕಗಳನ್ನು ಕೂಡ ಇಲಾಖೆ ಸ್ಪಷ್ಟಪಡಿಸಿದ್ದು, ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸರಣಿ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಪ್ರಮುಖ ದಿನಾಂಕಗಳು ಮತ್ತು ಶೈಕ್ಷಣಿಕ ಅವಧಿ:
ಶಾಲೆಗಳ ಪುನರಾರಂಭ: ಮೇ 29, 2026
ಮೊದಲನೇ ಶೈಕ್ಷಣಿಕ ಅವಧಿ: 29.05.2026 ರಿಂದ 02.10.2026 ರವರೆಗೆ.
ದಸರಾ ರಜೆ: 03.10.2026 ರಿಂದ 21.10.2026 ರವರೆಗೆ.
ಎರಡನೇ ಶೈಕ್ಷಣಿಕ ಅವಧಿ: 22.10.2026 ರಿಂದ 10.04.2027 ರವರೆಗೆ.
ಬೇಸಿಗೆ ರಜೆ: 11.04.2027 ರಿಂದ 28.05.2027 ರವರೆಗೆ.
ಶೈಕ್ಷಣಿಕ ವರ್ಷದ ಅಂಕಿ-ಅಂಶಗಳು:
ಒಟ್ಟು 365 ದಿನಗಳ ಈ ಶೈಕ್ಷಣಿಕ ವರ್ಷದಲ್ಲಿ ಒಟ್ಟು ಶಾಲಾ ಕರ್ತವ್ಯದ ದಿನಗಳು: 245 ದಿನಗಳು
ಒಟ್ಟು ರಜೆ ದಿನಗಳು (ಭಾನುವಾರ ಸೇರಿದಂತೆ): 119 ದಿನಗಳು
ಬೋಧನಾ-ಕಲಿಕಾ ಪ್ರಕ್ರಿಯೆಗೆ ಲಭ್ಯವಿರುವ ದಿನಗಳು: 181 ದಿನಗಳು
ವಿಶೇಷ ಸೂಚನೆಗಳು:
ದಾಖಲಾತಿ ಆಂದೋಲನ: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ತರಲು ನವೆಂಬರ್ 2025 ರಿಂದ ಜೂನ್ 2026 ರವರೆಗೆ ನಿರಂತರವಾಗಿ “ದಾಖಲಾತಿ ಜಾಗೃತಿ ಅಭಿಯಾನ” ನಡೆಸಲು ಸೂಚಿಸಲಾಗಿದೆ.
ಶಾಲಾ ಸಿದ್ಧತೆ: ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರು ಮೇ 29ರಂದೇ ಹಾಜರಾಗಿ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಮೇ 30ರಂದು ‘ಪ್ರಾರಂಭೋತ್ಸವ’ದೊಂದಿಗೆ ದಾಖಲಾತಿ ಪ್ರಕ್ರಿಯೆ ಮುಕ್ತಾಯಗೊಳಿಸಬೇಕು.
ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕ: 2026-27ನೇ ಸಾಲಿಗೆ ಸರ್ಕಾರಿ ಶಾಲಾ ಮಕ್ಕಳಿಗೆ 02 ಜೊತೆ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ಶಾಲಾ ಹಂತದಲ್ಲಿ ತಲುಪಿಸಲು ಕ್ರಮ ಕೈಗೊಳ್ಳಬೇಕು.
ಪರಿಕ್ಷಾ ಮೌಲ್ಯಮಾಪನ: 2025-26ನೇ ಸಾಲಿನ 1 ರಿಂದ 9ನೇ ತರಗತಿಯ ಫಲಿತಾಂಶವನ್ನು ಏಪ್ರಿಲ್ 7 ಮತ್ತು 8, 2026 ರೊಳಗೆ ಸಿದ್ಧಪಡಿಸಿ, ಏಪ್ರಿಲ್ 10ರಂದು ಶಾಲಾ ಹಂತದಲ್ಲಿ ಪ್ರಕಟಿಸಬೇಕು.
ಸ್ಥಳೀಯ ರಜೆ: ಶಾಲಾ ಹಂತದಲ್ಲಿ ನೀಡಲಾಗುವ ಸ್ಥಳೀಯ ರಜೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪೂರ್ವಾನುಮೋದನೆ ಪಡೆಯುವುದು ಕಡ್ಡಾಯ.
ರಾಜ್ಯದಾದ್ಯಂತ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಈ ವಾರ್ಷಿಕ ಕಾರ್ಯಸೂಚಿಯನ್ನು ಪಾಲಿಸುವಂತೆ ಎಲ್ಲಾ ಶಾಲೆಗಳಿಗೆ ಇಲಾಖೆ ನಿರ್ದೇಶನ ನೀಡಿದೆ.







