ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಯಿ -ಮಗಳು ಇಬ್ಬರೂ ಪಾಸ್

ಸಮಗ್ರ ನ್ಯೂಸ್: “ಸಾಧಿಸುವ ಛಲವಿದ್ದರೆ ಸಾಧನೆಗೆ ವಯಸ್ಸು ಅಡ್ಡಿಯಾಗದು” ಎಂಬ ಮಾತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡ್‌ನಲ್ಲಿ ನಡೆದ ಈ ಅಪರೂಪದ ಘಟನೆ ಸಾಕ್ಷಿಯಾಗಿದೆ. ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ತಾಯಿ ಮತ್ತು ಮಗಳು ಏಕಕಾಲಕ್ಕೆ ಉತ್ತೀರ್ಣರಾಗುವ ಮೂಲಕ ಜಿಲ್ಲೆಯ ಗಮನ ಸೆಳೆದಿದ್ದಾರೆ.

Ad Widget ... ..

ಬಿ.ಸಿ. ರೋಡ್ ಕೈಕಂಬ ನಿವಾಸಿಯಾಗಿರುವ ನೇತ್ರಾವತಿ ವಿ.ಆರ್. ಅವರು ವೃತ್ತಿಯಲ್ಲಿ ಗೃಹಿಣಿ. ಸಂಸಾರದ ಜವಾಬ್ದಾರಿಗಳ ನಡುವೆಯೂ ಶಿಕ್ಷಣ ಮುಂದುವರಿಸಬೇಕೆಂಬ ಹಳೆಯ ಕನಸನ್ನು ಅವರು ಕೈಬಿಟ್ಟಿರಲಿಲ್ಲ. ಈ ಬಾರಿ ಕಲಾ ವಿಭಾಗದಲ್ಲಿ ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಎದುರಿಸಿದ್ದ ನೇತ್ರಾವತಿ ಅವರು ಮೊದಲ ಪ್ರಯತ್ನದಲ್ಲೇ 257 ಅಂಕಗಳನ್ನು ಗಳಿಸಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

Ad Widget

ಒಂದೆಡೆ ತಾಯಿ ಪರೀಕ್ಷೆಯಲ್ಲಿ ಗೆದ್ದರೆ, ಮಗಳು ಹೇಮಶ್ರೀ ಆರ್. ಅವರು ತಾಯಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಭರ್ಜರಿ ಸಾಧನೆ ಮಾಡಿದ್ದಾರೆ. ಬಿ.ಮೂಡದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಹೇಮಶ್ರೀ, ಕಲಾ ವಿಭಾಗದಲ್ಲಿ 562 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸಿ ಕಿರ್ತಿ ತಂದಿದ್ದಾರೆ.

ನೇತ್ರಾವತಿ ಅವರ ಪತಿ ಮತ್ತು ಹೇಮಶ್ರೀ ಅವರ ತಂದೆಯಾಗಿರುವ ರವಿಕುಮಾರ್ ಅವರು ನಂದಾವರ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೆಯಲ್ಲೇ ಒಬ್ಬರು ಶಿಕ್ಷಕರಾಗಿರುವುದರಿಂದ ಪತ್ನಿ ಮತ್ತು ಮಗಳ ಈ ಶೈಕ್ಷಣಿಕ ಸಾಧನೆಗೆ ಅವರು ಬೆನ್ನೆಲುಬಾಗಿ ನಿಂತಿದ್ದರು. “ಪತ್ನಿ ಮತ್ತು ಮಗಳು ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾಗಿರುವುದು ನನಗೆ ಅತೀವ ಸಂತೋಷ ತಂದಿದೆ,” ಎಂದು ರವಿಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ತಾಯಿ-ಮಗಳ ಅಪರೂಪದ ಜೋಡಿ ಈಗ ಕರಾವಳಿ ಭಾಗದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಉನ್ನತ ಶಿಕ್ಷಣ ಪಡೆಯಬಯಸುವ ಅನೇಕ ಮಹಿಳೆಯರಿಗೆ ನೇತ್ರಾವತಿ ಅವರ ಸಾಧನೆ ಸ್ಫೂರ್ತಿಯಾಗಿದೆ.

Leave a Comment

Your email address will not be published. Required fields are marked *