ಸಮಗ್ರ ನ್ಯೂಸ್: ಕರಾವಳಿ ಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಆದ್ಯತೆ ನೀಡುವ ಮೂಲಕ ಯುವಕರಿಗೆ ಉದ್ಯೋಗ ಸೃಷ್ಟಿಗೆ ಕ್ರಮ ವಹಿಸಬೇಕು ಎಂದು ಬಿಜೆಪಿ ಸದಸ್ಯ ಹರೀಶ್ ಪೂಂಜ ಆಗ್ರಹಿಸಿದರು.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ ನೀಡುತ್ತಿಲ್ಲ. ಇವತ್ತು ಗೋವಾ ರಾಜ್ಯಕ್ಕೆ ದೇಶ, ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ನಮ್ಮ ಕರಾವಳಿಯ ಮೂರು ಜಿಲ್ಲೆಗಳಲ್ಲಿ 25ಕ್ಕೂ ಹೆಚ್ಚು ಜಲಪಾತಗಳಿವೆ ಅವುಗಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಯಾಕೆ ಯೋಜನೆ ರೂಪಿಸುತ್ತಿಲ್ಲ ಎಂದು ಹರೀಶ್ ಪೂಂಜ ಪ್ರಶ್ನಿಸಿದರು.
‘ಟೆಂಪಲ್ ಟೂರಿಸಂ’ ನಮ್ಮ ಜಿಲ್ಲೆಗಳಲ್ಲಿ ಇರುವಷ್ಟು ಬೇರೆ ಜಿಲ್ಲೆಗಳಲ್ಲಿ ಇಲ್ಲ. ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮುಂದಿನ 25 ವರ್ಷಗಳ ಯೋಜನೆ ರೂಪಿಸುವ ಅಗತ್ಯವಿದೆ. ನಮ್ಮ ಕರಾವಳಿ ಜಿಲ್ಲೆಗಳಲ್ಲಿ 14 ವೈದ್ಯಕೀಯ ಕಾಲೇಜುಗಳಿವೆ. ಈ ಭಾಗದಲ್ಲಿ ‘ಹೆಲ್ತ್ ಟೂರಿಸಂ’ ಅನ್ನು ಪ್ರೋತ್ಸಾಹಿಸಬಹುದಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಸರಕಾರ ವಾರ್ಷಿಕ 5 ಸಾವಿರ ಕೋಟಿ ರೂ.ನೀಡುತ್ತದೆ. ಆದರೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ.ಗಳನ್ನು ನೀಡದಿದ್ದರೆ ಹೇಗೆ? ಎಂದು ಅವರು ಹೇಳಿದರು.
ನಮಗೆ ರಸ್ತೆ, ಮೂಲಸೌಕರ್ಯ, ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಯೋಜನೆ, ಯುವಕರಿಗೆ ಉದ್ಯೋಗ ನೀಡಿ ಎಂದು ಜನ ಕೇಳುತ್ತಿದ್ದಾರೆ. ಆಡಳಿತ ಪಕ್ಷದ ಸದಸ್ಯರು ಬಜೆಟ್ ಬಗ್ಗೆ ಮಾತನಾಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಹೊಗಳಿ ಅಟ್ಟಕ್ಕೆ ಏರಿಸುತ್ತಿದ್ದಾರೆ. ಆದರೆ, ಈ ಬಜೆಟ್‍ನಲ್ಲಿ ಏನು ಇಲ್ಲ ಎಂಬ ವಾಸ್ತವ ಜನರಿಗೆ ಗೊತ್ತಿದೆ ಎಂದು ಹರೀಶ್ ಪೂಂಜ ಟೀಕಿಸಿದರು.







