ಸಮಗ್ರ ನ್ಯೂಸ್: ಪುತ್ತೂರು ನಗರದ ಆಕಾಶದಲ್ಲಿ ಮಂಗಳವಾರ (ಮಾ. 3) ಮಧ್ಯಾಹ್ನ ಮಿನಿ ಜೆಟ್ ವಿಮಾನವೊಂದು ಅತೀ ಕೆಳಮಟ್ಟದಲ್ಲಿ ಹಾರಾಟ ನಡೆಸಿದ್ದು, ಸಾರ್ವಜನಿಕ ವಲಯದಲ್ಲಿ ಕೆಲಕಾಲ ತೀವ್ರ ಆತಂಕ ಹಾಗೂ ಕುತೂಹಲ ಮೂಡಿಸಿದ ಘಟನೆ ನಡೆದಿದೆ.
ಏನಿದು ಘಟನೆ? ಮಧ್ಯಾಹ್ನದ ವೇಳೆ ಹಠಾತ್ತನೆ ಬಂದ ಮಿನಿ ಜೆಟ್ ವಿಮಾನವೊಂದು ಭೂಮಿಗೆ ಅತೀ ಸಮೀಪದಲ್ಲಿ ಹಾರಾಟ ನಡೆಸತೊಡಗಿತು. ಅದರಲ್ಲೂ ವಿಶೇಷವಾಗಿ ಐತಿಹಾಸಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಗದ್ದೆಯ ಮೇಲ್ಭಾಗದಲ್ಲಿ ಅತ್ಯಂತ ತಳಮಟ್ಟದಲ್ಲಿ ವಿಮಾನ ಹಾರಾಡುತ್ತಿರುವುದನ್ನು ಕಂಡು ಜನರು ಬೆಚ್ಚಿಬಿದ್ದರು. ಒಂದಲ್ಲ ಎರಡಲ್ಲ, ಸುಮಾರು 10 ರಿಂದ 15 ಬಾರಿ ನಗರದ ವಿವಿಧ ಭಾಗಗಳಲ್ಲಿ ಈ ಜೆಟ್ ಸುತ್ತು ಹೊಡೆದಿದೆ.
ನಗರದ ಜನವಸತಿ ಪ್ರದೇಶಗಳ ಮೇಲೆ ಇಷ್ಟು ಕೆಳಮಟ್ಟದಲ್ಲಿ ವಿಮಾನ ಹಾರಾಡಲು ಕಾರಣವೇನು? ಯಾವುದಾದರೂ ಅಪಾಯವಿದೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡಿದವು. ಒಂದೊಂದು ಪರಿಸರ ವ್ಯಾಪ್ತಿಯಲ್ಲಿ ವೃತ್ತಾಕಾರವಾಗಿ ಸುತ್ತುತ್ತಾ ಸಾಗುತ್ತಿದ್ದ ಈ ಮಿನಿ ಜೆಟ್‌ನ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆದವು.
ಘಟನೆಯಿಂದ ಆತಂಕಗೊಂಡ ಜನರಿಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಕ್ಷಣ ಸ್ಪಷ್ಟನೆ ನೀಡುವ ಮೂಲಕ ಸಮಾಧಾನಪಡಿಸಿದ್ದಾರೆ. ಈ ಹಾರಾಟವು ಯಾವುದೇ ಅಪಾಯದ ಮುನ್ಸೂಚನೆಯಲ್ಲ, ಬದಲಾಗಿ ಇದು ಭಾರತೀಯ ಭೂಗರ್ಭ ಶಾಸ್ತ್ರ ಇಲಾಖೆಯ (Geological Survey of India) ವತಿಯಿಂದ ನಡೆಯುತ್ತಿರುವ ವೈಜ್ಞಾನಿಕ ಸಮೀಕ್ಷೆಯಾಗಿದೆ ಎಂದು ತಿಳಿಸಿದ್ದಾರೆ. “ಈ ಮಿನಿ ಜೆಟ್ ಭೂಗರ್ಭದ ಅದಿರು ಅಥವಾ ನೈಸರ್ಗಿಕ ಸಂಪನ್ಮೂಲಗಳ ಪತ್ತೆಗಾಗಿ ನಡೆಸುವ ವೈಜ್ಞಾನಿಕ ಸರ್ವೆ ಕಾರ್ಯದಲ್ಲಿ ತೊಡಗಿದೆ.
ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯಲ್ಲೂ ಇಂತಹುದೇ ಸಮೀಕ್ಷೆ ನಡೆಸಲಾಗಿತ್ತು. ಗಾಳಿಯ ವೇಗ ಮತ್ತು ದಿಕ್ಕನ್ನು ಆಧರಿಸಿ ಅತ್ಯಂತ ನಿಖರವಾಗಿ ಸಮೀಕ್ಷೆ ನಡೆಸಲು ವಿಮಾನವು ಕೆಳಮಟ್ಟದಲ್ಲಿ ಹಾರಾಟ ನಡೆಸುತ್ತಿದೆ,” ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.







