ಸಮಗ್ರ ನ್ಯೂಸ್: ಕೇರಳಂ ನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ವಿಕಲಚೇತನ (ಕಿವುಡು ಮತ್ತು ಮೂಗ) ಯುವಕನೊಬ್ಬನನ್ನು ಹನಿಟ್ರಾಪ್ ಮಾಡಿ ಲಾಡ್ಜ್‌ಗೆ ಕರೆಸಿಕೊಂಡ ಯುವತಿ, ಆತನ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ ಘಟನೆ ಕೊಚ್ಚಿಯ ಪನಂಪಿಳ್ಳಿ ನಗರದಲ್ಲಿ ನಡೆದಿದೆ.
ನಾರ್ತ್ ಪರವೂರ್ ಮೂಲದ ಸ್ವಪ್ನಾ ಎಂಬ ಯುವತಿ, ತನ್ನ ಸ್ನೇಹಿತರಾದ ಜಾನ್ ರಾಹುಲ್, ಅಮಲ್ ಮತ್ತು ಆನಂದ್ ಎಂಬವರೊಂದಿಗೆ ಸೇರಿ ಕೊಲ್ಲಂನ ನಿಲ್ಲಿಲ್ಲಾ ನಿವಾಸಿ ಅಮಲ್ ದೇವ್ ಎಂಬ ಯುವಕನನ್ನು ಹನಿಟ್ರಾಪ್ ಮಾಡಿದ್ದಾಳೆ.
ಈಕೆ ಸಂತ್ರಸ್ತ ಯುವಕನೊಂದಿಗೆ ಕಳೆದ ಕೆಲವು ದಿನಗಳಿಂದ ಪ್ರೀತಿಯ ನಾಟಕವಾಡುತ್ತಾ ಮಾತನಾಡಿ, ಈ ತಿಂಗಳ 25 ರಂದು ಪನಂಪಿಳ್ಳಿಯ ಲಾಡ್ಜ್‌ವೊಂದಕ್ಕೆ ಬರುವಂತೆ ಕರೆದಿದ್ದಾಳೆ.
ಯುವಕನು ಸಮುದ್ರ ತೀರದಲ್ಲಿ (ಬೀಚ್) ಭೇಟಿಯಾಗೋಣ ಎಂದು ಹೇಳಿದರೂ ಕೇಳದ ಸ್ವಪ್ನಾ, ಲಾಡ್ಜ್‌ಗೆ ಬರುವಂತೆ ಒತ್ತಾಯಿಸಿದ್ದಾಳೆ. ಅದರಂತೆ ಸಂಜೆ 6 ಗಂಟೆಗೆ ಅಮಲ್ ದೇವ್ ಲಾಡ್ಜ್ ತಲುಪಿದ್ದಾನೆ. ಅಷ್ಟರಲ್ಲಾಗಲೇ ಪೂರ್ವಯೋಜಿತ ಸಂಚಿನಂತೆ ಆಕೆಯ ಮೂವರು ಸ್ನೇಹಿತರು ಬಾತ್‌ರೂಂನಲ್ಲಿ ಅಡಗಿ ಕುಳಿತಿದ್ದರು.
ಅಮಲ್ ದೇವ್ ಬಂದ ನಂತರ ಸ್ವಪ್ನಾ ಆತನ ಮೇಲೆ ಶಾರೀರಿಕ ಸಂಬಂಧಕ್ಕಾಗಿ ಒತ್ತಡ ಹೇರಿದ್ದಾಳೆ. ವಿವಿಧ ಭಂಗಿಗಳಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ತೆಗೆದು ನಂತರ ಬ್ಲ್ಯಾಕ್‌ಮೇಲ್ ಮಾಡುವುದು ಇವರ ಯೋಜನೆಯಾಗಿತ್ತು. ಆದರೆ ಯುವಕ ಇದಕ್ಕೆ ನಿರಾಕರಿಸಿದಾಗ, ಬಾತ್‌ರೂಂನಲ್ಲಿದ್ದ ಮೂವರು ಸ್ನೇಹಿತರು ಹೊರಬಂದು ಆತನನ್ನು ಮನಬಂದಂತೆ ಥಳಿಸಿದ್ದಾರೆ.
ಬಳಿಕ ಆತನನ್ನು ಬೆತ್ತಲೆಗೊಳಿಸಿ ಫೋಟೋ ತೆಗೆದ ಆರೋಪಿಗಳು, ಹಣ ನೀಡದಿದ್ದರೆ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆತನ ಗೂಗಲ್ ಪೇ ಪಿನ್ ನಂಬರ್ ಪಡೆದು ಹಣ ದೋಚಲು ಯತ್ನಿಸಿದಾಗ, ಖಾತೆಯಲ್ಲಿ ಹಣ ಕಡಿಮೆ ಇದ್ದಿದ್ದರಿಂದ ಆತನನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.
ಸಂತ್ರಸ್ತ ಯುವಕ ಪೊಲೀಸರ ಮೊರೆ ಹೋಗಿದ್ದು, ಲಾಡ್ಜ್‌ನ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ನಾಲ್ವರು ಆರೋಪಿಗಳನ್ನು ಗುರುತಿಸಿ ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನು ಪೊಲೀಸರು ವಿಚಾರಣೆ ನಡೆಸುತ್ತಿರುವ ವೇಳೆ ಹನಿಟ್ರಾಪ್ ಮಾಡಿದ ಯುವತಿ ನಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕೆಯ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.







