ಸಮಗ್ರ ನ್ಯೂಸ್: ಸೊಂಟ ನೋವು ಎಂದು ಖಾಸಗಿ ಕ್ಲಿನಿಕ್‌ಗೆ ಹೋದ ಯುವಕ ಸಾವನಪ್ಪಿರುವ ಘಟನೆ ಕೊಡಗಿನ ಸುಂಟಿಕೊಪ್ಪದಲ್ಲಿ ನಡೆದಿದೆ. ವಿನೋದ್ (34) ಮೃತ ಯುವಕ. ಗುರುವಾರ ಸಂಜೆ ಐದು ಗಂಟೆಗೆ ವಿನೋದ್ ಸುಂಟಿಕೊಪ್ಪದಲ್ಲಿರುವ ಉಮಾ ಕ್ಲಿನಿಕ್‌ಗೆ ಸೊಂಟ ನೋವೆಂದು ಹೋಗಿದ್ದರು.
ಈ ವೇಳೆ ಯುವಕನಿಗೆ ಎರಡು ಇಂಜೆಕ್ಷನ್ ಅನ್ನು ವೈದ್ಯರು ಕೊಟ್ಟಿದ್ದರು. ನಂತರ ಮನೆಗೆ ಹೋಗುತ್ತಿದ್ದಂತೆ ವಿನೋದ್ ಅಸ್ವಸ್ಥಗೊಂಡಿದ್ದರು. ತಕ್ಷಣವೇ ಮನೆಯವರು ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಆದರೆ ಅಸ್ಪತ್ರೆಗೆ ಬರುವಷ್ಟರಲ್ಲಿ ಯುವಕ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಸದ್ಯ ಕೊಡಗು ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಯುವಕನ ಮೃತದೇಹವನ್ನು ಇರಿಸಲಾಗಿದೆ. ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಆಗಮಿಸಿದ್ದು, ವೈದ್ಯನ ವಿರುದ್ಧ ಸಂಬಂಧಿಕರ ಆಕ್ರೋಶ ವ್ಯಕ್ತವಾಗಿದೆ. ಇನ್ನು ವೈದ್ಯನ ನಿರ್ಲಕ್ಷ್ಯತನದಿಂದ ಚಿಕಿತ್ಸೆಯಲ್ಲಿ ವ್ಯತ್ಯಾಸವಾಗಿ ಯುವಕ ಮೃತಪಟ್ಟಿರುವ ಆರೋಪ ಕೇಳಿಬಂದಿದೆ.



























