ಸಮಗ್ರ ನ್ಯೂಸ್: ವಿವಾದ, ಗೊಂದಲಗಳ ನಡುವೆಯೇ ಸೋಮವಾರದಿಂದ ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನೀರಸ ಆರಂಭ ಕಂಡಿದೆ. ಮೊದಲ ದಿನದಾಂತ್ಯಕ್ಕೆ ನಿರೀಕ್ಷಿತ 20 ಲಕ್ಷ ಜನರ ಬದಲು 2765 ಕುಟುಂಬಗಳ ಕೇವಲ 10,642 ಮಂದಿಯ ಸಮೀಕ್ಷೆ ಮಾತ್ರ ನಡೆಸಲಾಗಿದೆ.
ಇಂಟರ್ನೆಟ್ ಇಲ್ಲದ ಕಡೆ ಸಮೀಕ್ಷೆಗೆ ಬಳಸುವ ಆಯಪ್ ಕೆಲಸ ಮಾಡದೇ ಇರುವುದು, ಮೊದಲ ದಿನ ಗಣತಿದಾರರಿಗೆ ಸೂಕ್ತ ರೀತಿಯಲ್ಲಿ ಕಿಟ್ ವಿತರಣೆ ಆಗದ್ದು, ಕೆಲವು ಕಡೆ ಕಿಟ್‌ಗಳು ಸಂಜೆ ವೇಳೆಗೆ ಕೈ ಸೇರಿದ್ದು, ಇನ್ನು ಕೆಲವರಿಗೆ ಕಿಟ್‌ಗಳು ದೊರೆತರೂ ಮೊಬೈಲ್ ನೆಟ್‌ವರ್ಕ್ ಕೈಕೊಟ್ಟಿದ್ದು, ಇವೆರಡೂ ಇದ್ದರೂ, ಗಣತಿದಾರರಿಗೇ ಆ ಆಯಪ್ ಬಗ್ಗೆ ಅಪೂರ್ಣ ಮಾಹಿತಿ ಇರುವುದು ಸೇರಿದಂತೆ ಹಲವು ಕಾರಣಗಳಿಂದ ಗಣತಿಗೆ ಅಡ್ಡಿಯಾಗಿದೆ ಎನ್ನಲಾಗಿದೆ.
ಸೋಮವಾರ ಮಧ್ಯಾಹ್ನ 2 ಗಂಟೆ ವೇಳೆಗೆ ಕೇವಲ 400 ಕುಟುಂಬಗಳ ಸಮೀಕ್ಷೆ ನಡೆದಿದ್ದು, ದಿನದ ಅಂತ್ಯಕ್ಕೆ ಅದು ಕೇವಲ 10,642 ಮಂದಿಗೆ ತಲುಪಿದೆ. ತನ್ಮೂಲಕ ಸಮೀಕ್ಷೆಗೆ ಅಂದಾಜು ಮಾಡಿರುವ 7 ಕೋಟಿ ಜನಸಂಖ್ಯೆಯಲ್ಲಿ ಕನಿಷ್ಠ ಶೇ. 0.015 ರಷ್ಟು ಜನಸಂಖ್ಯೆಯನ್ನು ಮಾತ್ರವೇ ಮೊದಲ ದಿನ ಸಮೀಕ್ಷೆ ಮಾಡಲಾಗಿದೆ.
ದಿನದ ಅಂತ್ಯಕ್ಕೆ ಹಾವೇರಿಯಲ್ಲಿ 680 ಕುಟುಂಬದ 2,662 ಮಂದಿ, ಚಿತ್ರದುರ್ಗದಲ್ಲಿ 420 ಕುಟುಂಬದ 1,579 ಮಂದಿ, ಗದಗ ಜಿಲ್ಲೆಯಲ್ಲಿ 376 ಕುಟುಂಬಗಳ 1,451 ಜನಸಂಖ್ಯೆ, ಬಾಗಲಕೋಟೆ ಜಿಲ್ಲೆಯಲ್ಲಿ 219 ಕುಟುಂಬಗಳ 893 ಮಂದಿ, ಬೆಳಗಾವಿಯಲ್ಲಿ 197 ಕುಟುಂಬಗಳ 766 ಮಂದಿ, ದಾವಣಗೆರೆ ಜಿಲ್ಲೆಯ 191 ಕುಟುಂಬಗಳ 748 ಸದಸ್ಯರು, ಮಂಡ್ಯ ಜಿಲ್ಲೆಯಲ್ಲಿ 172 ಕುಟುಂಬಗಳ 637 ಮಂದಿ, ಉತ್ತರ ಕನ್ನಡ ಜಿಲ್ಲೆಯ 125 ಕುಟುಂಬಗಳ 484 ಮಂದಿಯ ಸಮೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ.
ಉಳಿದಂತೆ ಹಾಸನ 63, ಕಲಬುರಗಿ 57, ಕೊಡಗು, ರಾಯಚೂರು ತಲಾ 37, ಚಿಕ್ಕಮಗಳೂರು 32, ವಿಜಯನಗರ 19, ವಿಜಯಪುರ, ಉಡುಪಿಯ ತಲಾ 7, ಕೊಪ್ಪಳ, ಬೀದರ್ ತಲಾ 6, ಬಳ್ಳಾರಿ, ಧಾರವಾಡ ತಲಾ 5, ಬೆಂಗಳೂರು ಗ್ರಾಮಾಂತರ, ಯಾದಗಿರಿ, ಚಿಕ್ಕಬಳ್ಳಾಪುರ ತಲಾ 3, ವಿಜಯನಗರ, ಕೋಲಾರ, ದಕ್ಷಿಣ ಕನ್ನಡ, ಚಾಮರಾಜನಗರ, ಬೆಳಗಾವಿ ಜಿಲ್ಲೆಗಳಲ್ಲಿ ತಲಾ ಎರಡು ಕುಟುಂಬಗಳ ಸಮೀಕ್ಷೆ ಮಾತ್ರ ನಡೆಸಿರುವುದಾಗಿ ಹಿಂದುಳಿದ ವರ್ಗಗಳ ಆಯೋಗ ತಿಳಿಸಿದೆ.







