ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳ ಆರೋಪ ಮಾಡಿದ್ದ ಚಿನ್ನಯ್ಯನ ಬಂಧನದ ಬಳಿಕ ಎಸ್‌ಐಟಿ ಅಧಿಕಾರಿಗಳು ಮತ್ತಷ್ಟು ತನಿಖೆಯನ್ನು ನಡೆಸುತ್ತಿದ್ದು, ಸೌಜನ್ಯ ಮಾವ ವಿಠ್ಠಲ ಗೌಡ ನೀಡಿದ ಮಾಹಿತಿಯ ಮೇರೆಗೆ ಬಂಗ್ಲೆ ಗುಡ್ಡದಲ್ಲಿ ಮಹಜರು ನಡೆಸಲಾಗಿದೆ.
ಸೆಪ್ಟೆಂಬರ್ 6ರಂದು ಬಂಗ್ಲೆ ಗುಡ್ಡಕ್ಕೆ ಎಸ್‌ಐಟಿ ಅಧಿಕಾರಿಗಳು ಭೇಟಿ ನೀಡಿದಾಗ ಎರಡು ಅಸ್ತಿಪಂಜರಗಳು ಸಿಕ್ಕಿವೆ ಎಂದು ಹೇಳಲಾಗಿದೆ. ಆದರೆ ಇದೀಗ ‘ಬೆಂಗಳೂರು ಪೋಸ್ಟ್’ ವೆಬ್‌ಸೈಟ್ ಈ ಕುರಿತಾಗಿ ವರದಿಯೊಂದನ್ನು ಮಾಡಿದ್ದು, ಈ ವರದಿ ಪ್ರಕಾರ ಆ ಸ್ಥಳದಲ್ಲಿ ಕೇವಲ ಎರಡಲ್ಲ ಹಲವು ಅಸ್ತಿಪಂಜರಗಳು ಸಿಕ್ಕಿವೆ ಎಂದು ತಿಳಿಸಿದೆ.
ಪತ್ತೆಯಾದ ಮೂಳೆಗಳ ಪೈಕಿ ಕೆಲವೊಂದು ಹಳೆ ಮೂಳೆಗಳಿವೆ. ಆದರೆ ಎಫ್‌ಎಸ್‌ಎಲ್ ವರದಿ ಬಂದ ನಂತರವಷ್ಟೇ ಮೂಳೆಗಳು ಎಷ್ಟು ಹಳೆಯದು ಎಂಬ ಮಾಹಿತಿ ತಿಳಿದುಬರಲಿದೆ. ಈ ಸ್ಥಳದಲ್ಲಿ ಕೆಲ ಮೂಳೆಗಳು ನೆಲದ ಮೇಲೆಯೇ ಸಿಕ್ಕಿದ್ದು, ಹೆಣಗಳನ್ನು ಹೂಳುವ ಬದಲು ಸ್ವಲ್ಪವೇ ಮಣ್ಣು ಮುಚ್ಚಿ ಹೋಗಿರಬಹುದು ಎಂದು ಹೇಳಲಾಗುತ್ತಿದೆ.
ಇಡೀ ಅಸ್ಥಿಪಂಜರ ಸಿಕ್ಕರೇ, ಲಿಂಗ, ವಯಸ್ಸು, ಎತ್ತರ ಮತ್ತು ಕೆಲ ಸಂದರ್ಭಗಳಲ್ಲಿ ಸಾವಿಗೆ ಕಾರಣ ಏನು ಅಂತ ತಿಳಿಯಬಹುದು. ಒಂದು ವೇಳೆ ಅಸ್ಥಿಪಂಜರವನ್ನು ಕಾಣೆಯಾದ ವ್ಯಕ್ತಿಯೊಂದಿಗೆ ಜೋಡಿಸಲು, ಕಾಣೆಯಾದ ವ್ಯಕ್ತಿಯ ಸಂಬಂಧಿಯ ಡಿಎನ್‌ಎ ಜೊತೆ ಹೋಲಿಕೆ ಮಾಡಿ ನೋಡುತ್ತಾರೆ. ದೇಹವನ್ನು ಹೂತ ಮಣ್ಣಿನ ಸ್ವರೂಪವನ್ನು ಆಧರಿಸಿ ಅಸ್ಥಿಪಂಜರ ಕೊಳೆಯಲು ಒಂದರಿಂದ ಮೂರು ತಿಂಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ ಎಂದು ಹೆಸರು ವಿಧಿವಿಜ್ಞಾನ ತಜ್ಞರು ಹೇಳುತ್ತಾರೆ.







