ಸಮಗ್ರ ನ್ಯೂಸ್: ಐಸಿಸಿ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಟೀಮ್ ಇಂಡಿಯಾ ಗೆಲುವಿನ ಅಭಿಯಾನ ಆರಂಭಿಸಿದೆ. ನ್ಯೂಯಾರ್ಕ್ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಐರ್ಲೆಂಡ್ ತಂಡದ ವಿರುದ್ಧ ಭರ್ಜರಿ 8 ವಿಕೆಟ್ಗಳ ಗೆಲುವು ಸಾಧಿಸಿತು.
ಈ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹಲವು ದಾಖಲೆ ಬರೆದಿದ್ದಾರೆ. ನಾಯಕನಾಗಿಯೂ ವಿಶೇಷ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
37 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಿತ 53 ರನ್ ಕಲೆ ಹಾಕಿದ ರೋಹಿತ್ ಶರ್ಮಾ ರಿಟೈರ್ಡ್ ಹರ್ಟ್ ಆಗಿ ಹೊರ ನಡೆದರು. ಆದರೆ ಈ ಅರ್ಧಶತಕದೊಂದಿಗೆ ಹಲವು ದಾಖಲೆ ಬರೆದಿದ್ದಾರೆ. ಘಟಾನುಘಟಿ ಆಟಗಾರರನ್ನೇ ಹಿಂದಿಕ್ಕುವ ಮೂಲಕ ಗಮನ ಸೆಳೆದಿದ್ದಾರೆ. ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಹಿಟ್ಮ್ಯಾನ್, ದೀರ್ಘಕಾಲದ ಎಂಎಸ್ ಧೋನಿ ದಾಖಲೆಯನ್ನೂ ಮುರಿದಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ 16 ಓವರ್‌ಗಳಲ್ಲಿ 96 ರನ್ಗಳಿಗೆ ಆಲೌಟ್ ಆಯಿತು. ಉತ್ತರವಾಗಿ ಟೀಂ ಇಂಡಿಯಾ 12.2 ಓವರ್‌ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ರಿಷಭ್ ಪಂತ್ 13ನೇ ಓವರ್‌ನಲ್ಲಿ ಬ್ಯಾರಿ ಮೆಕಾರ್ಥಿ ಎಸೆತದಲ್ಲಿ ರಿವರ್ಸ್ ಸ್ಕೂಪ್‌ನೊಂದಿಗೆ ಸಿಕ್ಸರ್ ಬಾರಿಸುವ ಮೂಲಕ ಪಂದ್ಯವನ್ನು ಅಂತ್ಯಗೊಳಿಸಿದರು. ಭಾರತ ಪರ ನಾಯಕ ರೋಹಿತ್ ಶರ್ಮಾ 52 ರನ್ ಗಳಿಸಿದರೆ, ನಾಯಕನಿಗೆ ಉತ್ತಮ ಸಾಥ್ ನೀಡಿದ ರಿಷಬ್ ಪಂತ್ 36 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರು.ಇದೀಗ ಭಾರತ ತಂಡ ಎ ಗುಂಪಿನಲ್ಲಿ ಎರಡು ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದ್ದು, ರೋಹಿತ್ ಪಡೆ ತನ್ನ ಮುಂದಿನ ಪಂದ್ಯವನ್ನು ಜೂನ್ 9 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಲಿದೆ.







