ಸಮಗ್ರ ನ್ಯೂಸ್ : ಸಿಡಿಲು ಬಡಿದು 10 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ನರೋಣ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯಾದ್ಯಂತ ಇಂದು ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಕೆಲವೆಡೆ ಸಿಡಿಲು ಸಹಿತ ಮಳೆಯಾಗಿದೆ. ಪರಿಣಾಮ ಮಹೇಶ್(10) ಬಾಲಕ ಮೃತಪಟ್ಟಿದ್ದಾನೆ.
ಕೆಲಸಕ್ಕೆಂದು ಪೋಷಕರೊಂದಿಗೆ ಜಮೀನಿಗೆ ತೆರಳಿದ್ದ ಬಾಲಕ ಮಳೆ ಬಂತು ಎಂದು ವಾಪಸ್ ಬಂದಿದ್ದಾರೆ. ಈ ವೇಳೆ ಬಂಡಿಯಲ್ಲಿ ಕುಳಿತಿದ್ದ ಬಾಲಕನಿಗೆ ಸಿಡಿಲು ಬಡಿದಿದೆ. ಪರಿಣಾಮ ಬಾಲಕ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಇನ್ನು ಕಲಬುರಗಿ ನಗರ ಸೇರಿ ಜಿಲ್ಲೆಯಾದ್ಯಂತ ಬಿರುಗಾಳಿ ಗುಡುಗು ಸಹಿತ ಸುರಿದ ಅಕಾಲಿಕ ಮಳೆಯ ಆರ್ಭಟಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಹಲವೆಡೆ ಮನೆಯ ಶೆಡ್‌ಗಳು ಕಿತ್ತುಹೋಗಿವೆ. ರೈತರ ಬೆಳೆಗಳು ನೆಲಕಚ್ಚಿವೆ. ಆಳಂದ ತಾಲೂಕಿನ ಖಜೂರಿ ಬಳಿ ಬಿರುಗಾಳಿ ಅರ್ಭಟಕ್ಕೆ ಲಾರಿಯೇ ಪಲ್ಟಿಯಾಗಿದೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


















