ಸಮಗ್ರ ನ್ಯೂಸ್: ಅವೈಜ್ಞಾನಿಕ ರಸ್ತೆ ಡುಬ್ಬಕ್ಕೆ ಮೂವರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಮೈಸೂರು ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದೆ. ಹಂಪ್ಸ್ ಗೆ ಬಲಿಯಾದ ಮೂವರ ಕುಟುಂಬದವರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ಹಂಪ್ಸ್ ಅನ್ನು ತೆರವುಗೊಳಿಸಲಾಗಿದೆ.
ಹಂಪ್ ನಿರ್ಮಿಸಿದ್ದ ಸ್ಥಳದಲ್ಲಿ ಮೃತರ ಕುಟುಂಬದರೊಂದಿಗೆ ಸಾರ್ವಜನಿಕರು ಪ್ರತಿಭಟನೆ ನಡೆಸಲು ಮುಂದಾದ ಬೆನ್ನಲ್ಲೇ ಬುಧವಾರ ರಾತ್ರೋರಾತ್ರಿ ಬೋಗಾದಿ ಮುಖ್ಯ ರಸ್ತೆಯಲ್ಲಿ ಮೂರು ಕಡೆ ಹಾಗೂ ಜೆಸ್ತಿ ರಸ್ತೆಯ ಆಯಿಷ್ ಆಸ್ಪತ್ರೆ ಮುಂದೆ ಇದ್ದ ಎರಡು ಹಂಪ್‌ಗಳನ್ನು ತೆರವುಗೊಳಿಸಲಾಗಿದೆ. ಈ ಮೂಲಕ ಜನಾಕ್ರೋಶದ ಬಿಸಿ ಪಾಲಿಕೆ ಅಧಿಕಾರಿಗಳಿಗೆ ಮುಟ್ಟಿದೆ.
ಆಯಿಷ್ ಆಸ್ಪತ್ರೆ ಮುಂದೆ ರಾತ್ರೋರಾತ್ರಿ ಹಾಕಿದ್ದ ಹಂಪ್ಸ್‌ಗಳನ್ನು ತೆರವುಗೊಳಿಸುವ ಭರದಲ್ಲಿ ಮುಖ್ಯ ರಸ್ತೆಯಲ್ಲಿ ದೊಡ್ಡ ಹೊಂಡವಾಗಿದೆ. ಇದರಿಂದ ಸುಗಮ ಸಂಚಾರಕ್ಕೆ ಧಕ್ಕೆಯಾಗಿದ್ದು, ರಾತ್ರಿ ವೇಳೆ ಗೊತ್ತಾಗದೆ ಹೊಂಡಕ್ಕೆ ಬಿದ್ದಲ್ಲಿ ಮತ್ತೆ ದುರಂತ ಸಂಭವಿಸುವ ಸಾಧ್ಯತೆಯಿದೆ. ಇದು ಇನ್ನೂ ಪಾಲಿಕೆ ಗಮನಕ್ಕೆ ಬಂದಂತಿಲ್ಲ.
ಶನಿವಾರ ರಾತ್ರಿ ಬೋಗಾದಿ ರಸ್ತೆಯಲ್ಲಿನ ಮೈಸೂರು ವಿವಿಯ ರಾಷ್ಟ್ರಕವಿ ಕುವೆಂಪು ಪ್ರತಿಮೆ ಎದುರು ಮತ್ತು ಜೆಎಸ್‌ಎಸ್ ಹಾಸ್ಟೆಲ್ ಬಳಿ ಜಂಕ್ಷನ್ ಮತ್ತು ಹಾಸ್ಟೆಲ್‌ನ ರಸ್ತೆಯಲ್ಲಿ ಹಾಗೂ ಆಯಿಷ್ ಆಸ್ಪತ್ರೆ ಮುಂದೆಯೂ ರಾತ್ರೋರಾತ್ರಿ ಹಂಪ್ಸ್ ನಿರ್ಮಿಸಿದ್ದ ಪಾಲಿಕೆ ಅಧಿಕಾರಿಗಳು ಬಿಳಿ ಮಾರ್ಕ್‌ಗಳನ್ನು ಹಾಕಿರಲಿಲ್ಲ. ಕನಿಷ್ಠ ಬ್ಯಾರಿಕೇಡ್‌ಗಳನ್ನೂ ಅಳವಡಿಸಿರಲಿಲ್ಲ. ಇದರ ಪರಿಣಾಮ ಕೇವಲ ೧೨ ಗಂಟೆ ಅವಧಿಯಲ್ಲೇ ೨೦ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಸಾಕಷ್ಟು ಮಂದಿ ಗಾಯಗೊಂಡಿದ್ದರು. ಹಲವು ವಾಹನಗಳು ಸಹ ಜಖಂಗೊಂಡಿದ್ದವು. ಇದರೊಂದಿಗೆ ಮೂವರು ತೀವ್ರವಾಗಿ ಗಾಯಗೊಂಡು ಒಂದೆರಡು ದಿನದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.







