ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದು, ಕರ್ನಾಟಕದ ಹೆಮ್ಮೆಯ ಶಿಲ್ಪಿ ಮೈಸೂರಿನ ಸಿದ್ದಾಂತಿ ಅರುಣ್ ಯೋಗಿರಾಜ್ ಕೆತ್ತಿದ ಶ್ರೀರಾಮ ಮೂರ್ತಿ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲು ಆಯ್ಕೆಯಾಗಿದೆ.
ಮೈಸೂರಿನ ಹಿರಿಯ ಶಿಲ್ಪ ಕಲಾವಿದರ ಕುಟುಂಬದ ಐದನೇ ತಲೆಮಾರಿನ ಕುಡಿಯಾಗಿರುವ ಅರುಣ್ ಯೋಗಿರಾಜ್ ಅವರು ಕೆತ್ತಿರುವ ರಾಮನ ವಿಗ್ರಹವನ್ನು ಅಯೋಧ್ಯೆ ರಾಮಮಂದಿರ ಸಮಿತಿಯು ಆಯ್ಕೆ ಮಾಡಿದೆ. ಈ ಮೂಲಕ ಕರ್ನಾಟಕಕ್ಕೂ ಹೆಮ್ಮೆಪಡುವ ಕ್ಷಣ ಬಂದಿದೆ. ಹೊಸ ವರ್ಷದ ದಿನವೇ ಆಯೋಧ್ಯೆ ರಾಮಮಂದಿರ ಸಮಿತಿಯು ಖುದ್ದು ಅರುಣ್ ಯೋಗಿರಾಜ್ ಅವರಿಗೆ ಕರೆ ಮಾಡಿ ನೀವು ರೂಪಿಸಿದ ವಿಗ್ರಹವನ್ನೇ ಆಯ್ಕೆ ಮಾಡಲಾಗಿದೆ ಎನ್ನುವ ಸಂದೇಶವನ್ನು ರವಾನಿಸಿದೆ. ಇದನ್ನು ಖುದ್ದು ಅರುಣ್ ಯೋಗಿರಾಜ್ ಅವರೇ ಖಚಿತಪಡಿಸಿದ್ದಾರೆ.
ಮೂವರಲ್ಲಿ ಒಬ್ಬರದ್ದು ಅಂತಿಮ:
ಕಳೆದ ವರ್ಷವೇ ರಾಮನವಿಗ್ರಹ ತಯಾರಿಸಲು ದೇಶದ ಹಲವಾರು ಕಲಾವಿದರನ್ನು ಆಯ್ಕೆ ಮಾಡಲಾಗಿತ್ತು.
ಇವರು ಕಳುಹಿಸಿದ ಮಾದರಿಗಳನ್ನು ಗುರುತಿಸಿ ಕೊನೆಗೆ ಕರ್ನಾಟಕದ ಇಬ್ಬರು ಹಾಗೂ ರಾಜಸ್ಥಾನದ ಒಬ್ಬರು ಕಲಾವಿದರ ಹೆಸರು ಅಂತಿಮಗೊಳಿಸಲಾಗಿತ್ತು. ಇದರಲ್ಲಿ ಅರುಣ್ ಯೋಗಿರಾಜ್, ಜಿ.ಎಸ್. ಭಟ್ ಕರ್ನಾಟಕದವರಾದರೇ. ಸಂಜಯ್ ಪಾಂಡೆ ಎನ್ನುವ ಕಲಾವಿದರು ರಾಜಸ್ಥಾನದವರು. ಈ ಮೂವರು ತಾವು ಕೆತ್ತಿದ್ದ ಮೂರ್ತಿಗಳನ್ನು ತೆಗೆದುಕೊಂಡು ಹೋಗಿದ್ದರು. ಇದರಲ್ಲಿ ಅತ್ಯುತ್ತಮ ಎನ್ನುವ ರೀತಿಯಲ್ಲಿರುವ ಅರುಣ್ ರೂಪಿಸಿದ 25 ಅಡಿ ಎತ್ತರದ ವಿಗ್ರಹವನ್ನು ಅಂತಿಮಗೊಳಿಸಲಾಗಿದೆ. ಈಗಾಗಲೇ ಅರುಣ್ ಯೋಗಿ ರಾಜ್ ಅವರು ಕೆಲ ದಿನಗಳ ಹಿಂದೆ ರೂಪಿಸಿದ್ದ ಎರಡು ಪ್ರಮುಖ ಮೂರ್ತಿಗಳು ಪ್ರತಿಷ್ಠಾಪನೆಗೊಂಡಿವೆ. ಉತ್ತರ ಭಾರತದ ಪ್ರಮುಖ ಸ್ಥಳಗಳಲ್ಲಿ ಪ್ರತಿಷ್ಠಾಪನೆಗೊಂಡಿವೆ. ಉತ್ತರಾಖಂಡದ ಕೇದಾರನಾಥಕ್ಕೆ 12 ಅಡಿ ಆದಿ ಶಂಕರಾಚಾರ್ಯರ ವಿಗ್ರಹ ಹಾಗೂ ಭಾರತ ಸರ್ಕಾರ ದೆಹಲಿ ಇಂಡಿಯಾ ಗೇಟ್ ನಲ್ಲಿ ಸ್ಥಾಪಿಸಿರುವ ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಏಕಶಿಲೆಯ ಕಪ್ಪು ಗ್ರಾನೈಟ್ ಕಲ್ಲಿನ ಶಿಲ್ಪ ಕೂಡ ಅರುಣ್ ಯೋಗಿರಾಜ್ ನಿರ್ಮಿಸಿದ್ದೇ.
ಯಾರು ಈ ಯೋಗಿರಾಜ್…?
ಮೈಸೂರಿನ ಐದು ತಲೆಮಾರಿನ ಪ್ರಸಿದ್ಧ ಶಿಲ್ಪಿಗಳ ಕೌಟುಂಬಿಕ ಹಿನ್ನೆಲೆ ಹೊಂದಿರುವ ಅರುಣ್ ಯೋಗಿರಾಜ್ ಪ್ರಸ್ತುತ ದೇಶದ ಬಹುಬೇಡಿಕೆಯ ಶಿಲ್ಪಿ.
ಅರುಣ್ ಅವರ ಕೈಚಳಕದಿಂದ ಸಾಧಕರ ಪ್ರತಿಮೆಗಳು ತಲೆ ಎತ್ತಬೇಕು ಎಂಬ ಬೇಡಿಕೆಯಿಂದಾಗಿ ದೇಶದ ವಿವಿಧ ರಾಜ್ಯಗಳು ಅರುಣ್ ಅವರನ್ನು ಹುಡುಕಿಕೊಂಡು ಬರುತ್ತಿವೆ. ತನಗೆ ಸಿಕ್ಕ ಅವಕಾಶಗಳ ಸಮರ್ಥ ಬಳಕೆಗೆ ಬಂದಾಗ ಅರುಣ್ ಉದ್ಯಮಶೀಲ. ಹೀಗಾಗಿಯೇ ದೇಶದ ನಾನಾ ರಾಜ್ಯಗಳಲ್ಲಿ ಇವರ ಕಲೆಗೆ ಬೇಡಿಕೆ ಸೃಷ್ಟಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅರುಣ್ ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಅರುಣ್ ತಂದೆ ಯೋಗಿರಾಜ್ ಕೂಡ ನುರಿತ ಶಿಲ್ಪಿ. ಕೆಲ ದಿನಗಳ ಹಿಂದೆಯಷ್ಟೇ ಅವರು ಮೃತಪಟ್ಟಿದ್ದಾರೆ. ಅವರ ಅಜ್ಜ ಬಸವಣ್ಣ ಶಿಲ್ಪಿಯಾಗಿದ್ದು, ಮೈಸೂರು ರಾಜರಿಂದ ಪೋಷಕರಾಗಿದ್ದರು. ಈ ತಲೆಮಾರಿನವರಾದ ಅರುಣ್ ಯೋಗಿರಾಜ್ ಅವರು ಬಾಲ್ಯದಿಂದಲೂ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದರು.
ಎಂಬಿಎ ಮುಗಿಸಿದ ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಕಾಲ ಕೆಲಸ ಮಾಡುತ್ತಿದ್ದರು. ಆದರೆ ಉದ್ದಕ್ಕೂ ಅವನಲ್ಲಿ ಸಹಜವಾಗಿಯೇ ಇದ್ದ ಶಿಲ್ಪಕಲೆ ವೃತ್ತಿಯ ಕೌಶಲದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಹೀಗಾಗಿ 2008ರಿಂದ ಕೆತ್ತನೆ ವೃತ್ತಿ ಮುಂದುವರಿಸಿ ಹದಿನೈದು ವರ್ಷದಲ್ಲಿ ಹೆಮ್ಮೆಯ ಸಾಧನೆ ಮಾಡಿದ್ದಾರೆ.







