ಸಮಗ್ರ ನ್ಯೂಸ್: ಸರ್ಕಾರದ ಯೋಜನೆಗಳನ್ನು ಪಡೆಯಲು ಜನರು ನಕಲಿ ಆಧಾರ್, ವೋಟರ್ ಐಡಿ ಸೇರಿದಂತೆ ಅನೇಕ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಸಿಕ್ಕಿಬಿದ್ದ ಸಾಕಷ್ಟು ನಿದರ್ಶನಗಳಿವೆ. ಅಂತಹುದೇ ಮತ್ತೊಂದು ಪ್ರಸಂಗ ಸಂಶಿಯಲ್ಲಿ ನಡೆದಿದೆ.
ಸಂಶಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಬುರ್ಖಾ ತೊಟ್ಟು ಕುಳಿತಿದ್ದ ವ್ಯಕ್ತಿಯನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಮಾಡಿರುವ ತಂತ್ರ ಎಂದು ಅನುಮಾನಿಸಿ ಹಿಡಿದಿದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬುರ್ಖಾ ತೊಟ್ಟಿದ್ದ ವ್ಯಕ್ತಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಡಗೇರಿಯವರು. ಆತನ ಹೆಸರು ವೀರಭದ್ರಯ್ಯ ನಿಂಗಯ್ಯ (58) ಎಂದು ಗುರುತಿಸಲಾಗಿದೆ.
‘ಬೆಂಗಳೂರಿನಿಂದ ರೈಲಿನಲ್ಲಿ ಬಂದು ಸಂಶಿಯಲ್ಲಿ ಇಳಿದಿದ್ದೆ, ರೈಲು ನಿಲ್ದಾಣದಲ್ಲಿ ಸಿಕ್ಕಿದ ಹಳೆಯ ಚೀಲದಲ್ಲಿ ಇದ್ದ ಬುರ್ಖಾವನ್ನು ತೊಟ್ಟು ಬಸ್ ನಿಲ್ದಾಣಕ್ಕೆ ಬಂದು ಕುಳಿತಿದ್ದೆ. ಹೊಟ್ಟೆಪಾಡಿಗೆ ಭಿಕ್ಷೆ ಬೇಡುತ್ತೇನೆ ಎಂದು ಆ ವ್ಯಕ್ತಿ ವಿಚಾರಣೆ ವೇಳೆ ತಿಳಿಸಿದ್ದಾರೆ’ ಎಂದು ಕುಂದಗೋಳ ಠಾಣೆ ಪೊಲೀಸರು ತಿಳಿಸಿದ್ದಾರೆ.
ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಆರಂಭವಾದ ದಿನದಿಂದ ಇಂಥ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿವೆ. ಇತ್ತೀಚೆಗೆ, ಮೂರ್ನಾಲ್ಕು ಜನ ಯುವಕರು ಸೀರೆಯುಟ್ಟು ಬಸ್‌ಗಾಗಿ ಕಾಯುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಮನರಂಜನೆಗಾಗಿ ಮಾಡಲಾಗಿತ್ತಾದರೂ, ಧಾರವಾಡ ಜಿಲ್ಲೆಯಲ್ಲಿ ಇಂತಹದ್ದೇ ನೈಜ ಘಟನೆಯೂ ನಡೆದಿದೆ.






