ಸಮಗ್ರ ನ್ಯೂಸ್: ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಬಲ್ನಾಡು ಗ್ರಾಮದ ಸಾರ್ಯ ಸಮೀಪ ಮನೆಯೊಂದು ಕುಸಿದು ಬಿದ್ದು ಅಪಾರ ನಷ್ಟ ಉಂಟಾದ ಘಟನೆ ನಡೆದಿದೆ.
ಬಲ್ನಾಡು ಗ್ರಾಮದ ಸಾರ್ಯ ಅಬರೆಗುರಿ ನಿವಾಸಿ ವಿಶ್ವನಾಥ ರೈ ಎಂಬವರ ಹಂಚಿನ ಮಾಡಿನ ಮನೆ ಮಳೆಗೆ ಕುಸಿದು ಬಿದ್ದಿರುವುದಾಗಿದೆ. ಕೂಲಿ ಕಾರ್ಮಿಕರಾಗಿ ಜೀವನ ನಿರ್ವಹಣೆ ಮಾಡುತ್ತಿರುವ ಇವರು ಪತ್ನಿ, ಇಬ್ಬರು ಪುತ್ರಿಯರು ಮನೆಯಲ್ಲಿ ವಾಸವಿದ್ದರು. ರಾತ್ರಿ ಸುಮಾರು ಒಂದೂವರೆ ಗಂಟೆ ವೇಳೆಗೆ ಮನೆ ಕುಸಿದು ಬಿದ್ದಿದೆ. ಮನೆ ಕುಸಿಯುತ್ತಿದ್ದ ಶಬ್ದ ಕೇಳಿ ಮನೆಯೊಳಗಿದ್ದವರು ಹೊರಗೆ ಓಡಿ ಬರುವ ಪ್ರಯತ್ನದಲ್ಲಿ ವಿಶ್ವನಾಥ ರೈಯವರ ಇಬ್ಬರು ಪುತ್ರಿಯರಿಗೆ ಸಣ್ಣ ಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಸದ್ಯ ಸಂಬಂಧಿಕರ ಮನೆಯಲ್ಲಿ ಅವರಿಗೆ ತಾತ್ಕಾಲಿಕವಾಗಿ ವಾಸಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆಯಾದರೂ ಈ ಕುಟುಂಬಕ್ಕೆ ಶಾಶ್ವತವಾದ ಸೂರಿನ ವ್ಯವಸ್ಥೆ ಆಗಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವಿಶ್ವನಾಥ ರೈಯವರ ಮನೆಗೆ ಸರಿಯಾದ ರಸ್ತೆಯ ವ್ಯವಸ್ಥೆಯೂ ಇಲ್ಲದೇ ಇರುವುದರಿಂದ ಸಾಮಾಗ್ರಿಗಳನ್ನು ಕೊಂಡೊಯ್ಯಲೂ ಹರಸಾಹಸ ಪಡಬೇಕಾಗಿದೆ ಎಂದು ಮಾಹಿತಿ ಲಭಿಸಿದೆ. ಗ್ರಾ.ಪಂ.ತಂಡ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಾತ್ಕಾಲಿಕ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.






