ಸಮಗ್ರ ನ್ಯೂಸ್: ಮಗಳ ಹುಟ್ಟುಹಬ್ಬದ ದಿನವೇ ದಂಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಆಂಧ್ರ ಪ್ರದೇಶದ ಅಲ್ಲೂರಿ ಸಿತಾರಾಮರಾಜು ಜಿಲ್ಲೆಯಲ್ಲಿ ನಡೆದಿದೆ.
ಆನ್ ಲೈನ್ ಲೋನ್ ಆಯಪ್ ಮಾಲೀಕನ ಕಿರುಕುಳಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿತ್ತಿದೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗಳು, ಕೊಳ್ಳಿ ದುರ್ಗ ರಾವ್ ಹಾಗೂ ರಮ್ಯಾ ಲಕ್ಷ್ಮಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ 6 ವರ್ಷದ ಹಿಂದೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಇವರಿಗೆ ನಾಗ ಸಾಯಿ (4), ಲಿಖಿತಾ (2) ಎಂಬ ಮಕ್ಕಳಿದ್ದಾರೆ. ಕುಟುಂಬದಲ್ಲಿ ನಾಲ್ವರು ಮಾತ್ರ ಇದ್ದು, ರಾಜಮಹೇಂದ್ರವರಮ್ ನ ಶಾಂತಿ ನಗರದಲ್ಲಿ ವಾಸಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಮೃತ ದುರ್ಗಾ ರಾವ್ ಅವರು ವೃತ್ತಿಯಲ್ಲಿ ಪೇಟಂರ್ ಆಗಿದ್ದರು. ಇವರ ಪತ್ನಿ ಟೇಲರ್ ಆಗಿದ್ದರು. ಮನೆಯಲ್ಲಿ ಹಣಕಾಸು ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಆನ್ಲೈನ್ ನ ಎರಡು ಲೋನ್ ಆಯಪ್ ಗೆ ಅರ್ಜಿ ಸಲ್ಲಿಸಿದ್ದರು.
ಹಣ ಪಡೆದ ಅವರು, ಸಮಯಕ್ಕೆ ಸರಿಯಾಗಿ ಹಣವನ್ನು ಮರುಪಾವತಿ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಲೋನ್ ಆಯಪ್ ನವರು ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ನೊಂದ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.
ಆತ್ಮಹತ್ಯೆಗೆ ಮೊದಲು ಮೃತ ರಮ್ಯಾ ಅವರು, ನಮ್ಮಿಬ್ಬರ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತನ್ನ ಸಂಬಂಧಿಗೆ ಹೇಳಿದ್ದಾರೆ.
ನಾವಿಬ್ಬರು ಸಾಯುತ್ತಿದ್ದೇವೆ ಎಂದು ವಾಟ್ಸ್ ಆಯಪ್ ಮೂಲಕ ಮೆಸೇಜ್ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.







