ಕರಾವಳಿ, ಮಲೆನಾಡು ಈಗ “ಮಳೆನಾಡು”| ನಿಲ್ಲದ ವರ್ಷಧಾರೆಗೆ ಜನಜೀವನ ತತ್ತರ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಮಳೆರಾಯ ತನ್ನ ನೈಜರೂಪ ತೋರಿಸುತ್ತಿದ್ದು ರಾಜ್ಯ ವರುಣನ ಕಾಟಕ್ಕೆ ತತ್ತರಿಸಿದೆ. ಕರಾವಳಿ ಜಿಲ್ಲೆಗಳು ಕೆರೆಯಂತಾಗಿದ್ದು ಮಲೆನಾಡು ಮಳೆನಾಡಾಗಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕರಾವಳಿಯ ಹಲವು ಕಡೆ ಕೃತಕ ನೆರೆ ಉಂಟಾಗಿದೆ.

Ad Widget ... ..

ಹಳ್ಳ ಕೊಳ್ಳಗಳೆಲ್ಲಾ ತುಂಬಿ ಹರಿಯುತ್ತಿದ್ದು ನದಿಗಳು ಅಪಾಯದ ಮಟ್ಟ ತಲುಪಿವೆ. ಇದರಿಂದ ನದಿ ಪಾತ್ರದ ಜನರಿಗೆ ಆತಂಕ ಎದುರಾಗಿದೆ. ಇನ್ನು ಕೆಲವು ಕಡೆ ಭೂಕುಸಿತ, ಗುಡ್ಡ ಕುಸಿತದ ಆತಂಕವಾದರೆ, ಇನ್ನೂ ಕೆಲ ಪ್ರದೇಶಗಳಲ್ಲಿ ಮನೆಗಳ ಒಳಗೆ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ. ಕೃಷಿ ಭೂಮಿಗಳು ನಾಶವಾಗಿದ್ದು ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.

Ad Widget

ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳು ಮಳೆಯ ಅಬ್ಬರಕ್ಕೆ ನಲುಗಿ ಹೋಗಿವೆ. ಇದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕೆಲ ಜಿಲ್ಲೆಗಳಲ್ಲಿ ರಕ್ಷಣಾ ತಂಡಗಳನ್ನ ಸಜ್ಜುಗೊಳಿಸಲಾಗಿದೆ. ಇನ್ನು ಕಳೆದ 24 ಗಂಟೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಕೊಡ್ಕಣಿ ಎಂಬಲ್ಲಿ ಅತಿಹೆಚ್ಚು 227 ಮಿಲಿಮೀಟರ್ ಮಳೆಯಾಗಿದೆ. ಮುಂದಿನ 24 ಗಂಟೆಯಲ್ಲಿ ಕರಾವಳಿ ಜಿಲ್ಲೆಗಳ ಬಹುತೇಕ ಕಡೆ ಅಧಿಕ ಮಳೆ, ಇನ್ನುಳಿದ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.

ಮಲೆನಾಡು ಜಿಲ್ಲೆಗಳ ಕೆಲವೊಂದು ಕಡೆ ಸಾಧಾರಣ ಮಳೆ ಮತ್ತು ಉಳಿದ ಕಡೆಯಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ . ಈ ಸಂಬಂಧ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ.

ಇನ್ನು ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್‌ ಹಾಗೂ ಹಾಸನ, ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆ, ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ ಇನ್ನು ಮಳೆಯ ಕಾರಣದಿಂದ ರಾಜ್ಯದ ಕೊಡಗು, ದ.ಕ, ಉಡುಪಿ, ಉ.ಕನ್ನಡ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಇನ್ನು ನೆರೆಯ ಮಹಾರಾಷ್ಟ್ರದ ಮುಂಬೈನಲ್ಲಿ ಮಳೆ ಅಬ್ಬರ ಇಂದೂ ಮುಂದುವರೆದಿದ್ದು, ರಸ್ತೆಗಳು ನೀರಿನಿಂದ ತುಂಬಿಹೋಗಿವೆ. ಇನ್ನು ಮುಂಬೈ ಮತ್ತು ಅಕ್ಕ ಪಕ್ಕದ ನಗರಗಳಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಅತ್ತ ಶಿಮ್ಲಾದಲ್ಲಿ ಸುರಿದ ಭಾರಿ ಮಳೆಯಿಂದ ಭೂಕುಸಿತ ಸಂಭವಿಸಿದೆ. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದಾರೆ. ಇನ್ನು ಕುಲುವಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಐವರು ಕಾಣೆಯಾಗಿದ್ದಾರೆ. ಅಸ್ಸಾಂ ಸಿಕ್ಕಿಂ ಸೇರಿದಂತೆ ಉತ್ತರ ಹಾಗೂ ಪೂರ್ವ ಭಾರತದಲ್ಲಿ ಮಳೆ ಮುಂದುವರೆದಿದೆ.

ಕರಾವಳಿ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾದ ಕಾರಣ ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ 5 ದಿನವೂ ಭಾರೀ ಮಳೆ ಕಾರಣ ನಾಳೆ ಆರೆಂಜ್ ಅಲರ್ಟ್, ಮುಂದಿನ ಮೂರು ದಿನ ಎಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Leave a Comment

Your email address will not be published. Required fields are marked *