ಸಮಗ್ರ ನ್ಯೂಸ್: ಮುಸ್ಲಿಂ ಮಹಿಳೆಯರಿಗೆ ಧಾರ್ಮಿಕ ಬೆದರಿಕೆ ಒಡ್ಡುತ್ತಿದ್ದ ಮುಸ್ಲಿಂ ಡಿಫೆನ್ಸ್ ಫೋರ್ಸ್ ಎಂಬ ವಾಟ್ಸ್ಆಯಪ್ ಗ್ರೂಪ್ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಇದು ಮುಸ್ಲಿಂ ಸಮುದಾಯದ ಗುಂಪೇ ಆಗಿದ್ದು, ತಮ್ಮದೇ ಸಮುದಾಯದ ಮಹಿಳೆಯರಿಗೆ ಬೆದರಿಕೆ ಒಡ್ಡುವ, ಎಚ್ಚರಿಕೆ ನೀಡುವ ಸಂದೇಶಗಳು ಈ ಗ್ರೂಪ್ನಲ್ಲಿ ಹರಿದಾಡಿವೆ ಎಂದು ಹೇಳಲಾಗಿದೆ. ಈ ಗ್ರೂಪ್ ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ, ಹಿಜಾಬ್ ತೆಗೆದರೆ ಅಂಥವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಮೆಸೇಜ್ಗಳು ಗುಂಪಿನಲ್ಲಿ ಹರಿದಾಡುತ್ತಿವೆ ಎನ್ನಲಾಗಿದೆ.

ಈ ಗುಂಪಿನಲ್ಲಿ ಕನ್ನಡದಲ್ಲಿಯೇ ಸಂದೇಶಗಳನ್ನು ಮಾಡಲಾಗಿದೆ. ಕೆಲವು ಮಾಲ್ಗಳ ಬೇಸ್ಮೆಂಟ್ಗಳಲ್ಲಿ ಬುರ್ಕಾ ಧರಿಸಿಕೊಂಡು ನಿಂತು ಅನುಚಿತವಾಗಿ ವರ್ತನೆ ಮಾಡುವ ಹೆಣ್ಣುಮಕ್ಕಳು ಕಂಡುಬರುತ್ತಿದ್ದಾರೆ. ಅವರಿಗೆ ನಮ್ಮ ಕಾರ್ಯಕರ್ತರು ಅವರಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಇನ್ನೊಮ್ಮೆ ಇಂಥ ದೃಶ್ಯ ಕಂಡುಬಂದರೆ ಅಂಥವರಿಗೆ ಹೊಡೆಯುತ್ತೇವೆ ಎಂದು ಈ ಮುಸ್ಲಿಂ ಡಿಫೆನ್ಸ್ ಫೋರ್ಸ್ ವಾಟ್ಸ್ ಅ್ಯಪ್ ಗ್ರೂಪ್ನಲ್ಲಿ ಹೇಳಲಾಗಿದೆ. ‘ನಿಮ್ಮ ಮಕ್ಕಳು ಎಲ್ಲಿಗೆ ಹೋಗುತ್ತಾರೆ, ಏನು ಮಾಡುತ್ತಾರೆ ಎಂಬುದನ್ನು ಗಮನಿಸಿ’ ಎಂದು ಪಾಲಕರಿಗೂ ತಿಳಿಸಲಾಗಿದೆ. ಈ ಗುಂಪಿನಲ್ಲಿ ಮಂಗಳೂರಿನ ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ಕಣ್ಣಿಟ್ಟಿದ್ದಾಗಿಯೂ ಸಂದೇಶದಲ್ಲಿ ತಿಳಿಸಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತ ಶಶಿ ಕುಮಾರ್ ತಿಳಿಸಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಹಾಕಲಾಗುತ್ತಿರುವ ಬೆದರಿಕೆಯುಕ್ತ ಮೆಸೇಜ್ಗಳ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಜೊತೆಗೆ ಪಾಲಕರ ಬಳಿಯೂ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದಾರೆ. ನಿಮ್ಮ ಮಕ್ಕಳಿಗೆ ಸಾರ್ವಜನಿಕ ಪ್ರದೇಶಗಳಲ್ಲಿ ಸೆಲ್ಫೀ ತೆಗೆಯದಂತೆ ಹೇಳಿ ಎಂಬ ಸಲಹೆಯನ್ನೂ ನೀಡಿದ್ದಾರೆ.






