ನವದೆಹಲಿ: ಅಮೆರಿಕದ ಪ್ರಸಿದ್ಧ ವಾಹನ ಉತ್ಪಾದನಾ ಕಂಪೆನಿ ಫೋರ್ಡ್ ಮೋಟಾರ್ಸ್ ಭಾರತದಲ್ಲಿನ ತನ್ನ ಘಟಕಗಳನ್ನು ಮುಚ್ಚುವುದಾಗಿ ಘೋಷಿಸಿದೆ. ಅದರಂತೆ ಗುಜರಾತ್ ಹಾಗೂ ತಮಿಳುನಾಡಿನಲ್ಲಿರುವ ಫೋರ್ಡ್ ಇಂಡಿಯಾ ಘಟಕಗಳು ಬಂದ್ ಆಗಲಿವೆ. ಈ ಹಿಂದೆ ಕಂಪನಿಯು ಚೆನ್ನೈ ಮತ್ತು ಗುಜರಾತ್ ನ ಸನಂದ್ ಘಟಕಗಳಲ್ಲಿ ಸುಮಾರು 2.5 ಬಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು. ಆದರೆ ಕಳೆದ 10 ವರ್ಷಗಳಲ್ಲಿ ಕಂಪನಿಯು 2 ಬಿಲಿಯನ್ ಡಾಲರ್ನಷ್ಟು ನಷ್ಟವನ್ನು ಅನುಭವಿಸಿದ್ದು, ಹೀಗಾಗಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಫೋರ್ಡ್ ಇಂಡಿಯಾ ತಿಳಿಸಿದೆ.
2021ರ ನಾಲ್ಕನೇ ತ್ರೈಮಾಸಿಕದ ವೇಳೆಗೆ ಸನಂದ್ ಘಟಕದಲ್ಲಿ ರಫ್ತಿಗಾಗಿ ನಿರ್ಮಿಸಲಿರುವ ವಾಹನಗಳ ತಯಾರಿಕೆಯನ್ನು ನಿಲ್ಲಿಸಲಿದೆ. ಹಾಗೆಯೇ 2022 ರ ಎರಡನೇ ತ್ರೈಮಾಸಿಕ ವೇಳೆಗೆ ಚೆನ್ನೈ ಘಟಕದಲ್ಲಿನ ವಾಹನ ಮತ್ತು ಎಂಜಿನ್ ತಯಾರಿಕೆಯನ್ನು ಫೋರ್ಡ್ ಇಂಡಿಯಾ ಸಂಪೂರ್ಣ ಸ್ಥಗಿತಗೊಳಿಸಲಿದೆ.
ಈ ಹಿಂದೆ ನಷ್ಟದ ಪರಿಣಾಮ ಜನರಲ್ ಮೋಟಾರ್ಸ್ ಮತ್ತು ಹಾರ್ಲೆ ಡೇವಿಡ್ಸನ್ ನಂತಹ ಅಮೇರಿಕನ್ ಕಂಪನಿಗಳು ಭಾರತದ ಮಾರುಕಟ್ಟೆಯನ್ನು ತೊರೆದಿದ್ದರು. ಇದೀಗ ಫೋರ್ಡ್ ಕಂಪೆನಿ ಕೂಡ ಉತ್ಪಾದನೆಯನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಅದರಂತೆ ಫಿಗೊ, ಆಸ್ಪೈರ್, ಫ್ರೀಸ್ಟೈಲ್, ಇಕೋಸ್ಪೋರ್ಟ್ ಮತ್ತು ಎಂಡೀವರ್ ನಂತಹ ಪ್ರಸ್ತುತ ಉತ್ಪನ್ನಗಳ ಮಾರಾಟವು ಅಸ್ತಿತ್ವದಲ್ಲಿರುವ ಡೀಲರ್ ದಾಸ್ತಾನುಗಳನ್ನು ಮಾರಾಟ ಮಾಡಿದ ನಂತರ ನಿಲ್ಲಲಿದೆ.
ಇನ್ನು ಫೋರ್ಡ್ ಭಾರತದಲ್ಲಿನ ನಮ್ಮ ಮೌಲ್ಯಯುತ ಗ್ರಾಹಕರನ್ನು ನೋಡಿಕೊಳ್ಳುವುದನ್ನು ಮುಂದುವರಿಸಲಿದೆ ಎಂದು ಫೋರ್ಡ್ ಇಂಡಿಯಾದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಅನುರಾಗ್ ಮೆಹ್ರೋತ್ರಾ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ ಆಮದಿನ ಮೂಲಕ ಭಾರತದಲ್ಲಿ ಫೋರ್ಡ್ ವಾಹನಗಳು ಖರೀದಿಗೆ ಲಭ್ಯವಿರಲಿದೆ.
ಮತ್ತೊಂದೆಡೆ ಎರಡು ಘಟಕಗಳ ಸ್ಥಗಿತದಿಂದ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಭೀತಿ ಎದುರಾಗಿದೆ. ಏಕೆಂದರೆ ಈ ಎರಡು ಘಟಕಗಳಲ್ಲಿ ಸುಮಾರು 4 ಸಾವಿರ ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಕಂಪೆನಿಯು ಉತ್ಪಾದನೆಯನ್ನು ನಿಲ್ಲಿಸಿದರೆ ಅದು ಉದ್ಯೋಗಿಗಳ ಮೇಲೆ ನೇರ ಪರಿಣಾಮ ಬೀರಬಹುದು. ಇದಾಗ್ಯೂ ಫೋರ್ಡ್ ಕಂಪೆನಿಯು ತಮ್ಮ ಉದ್ಯೋಗಿಗಳನ್ನು ಇತರೆ ಪಾಲುದಾರರೊಂದಿಗೆ ಕೆಲಸ ಮಾಡಲು ನೇಮಿಸಲಿದೆ ಎಂದು ತಿಳಿಸಿದೆ. ಅದರಂತೆ ಫೋರ್ಡ್ ಇಂಡಿಯಾದ ದೆಹಲಿ, ಚೆನ್ನೈ, ಮುಂಬೈ, ಸನಂದ್ ಮತ್ತು ಕೋಲ್ಕತ್ತಾದಲ್ಲಿ ಬಿಡಿಭಾಗಗಳ ಡಿಪೋಗಳಲ್ಲಿ ಕೆಲವರಿಗೆ ಉದ್ಯೋಗ ಸಿಗುವ ಸಾಧ್ಯತೆಯಿದೆ.







