ಸಮಗ್ರ ನ್ಯೂಸ್: ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ ಕಂಡುಬಂದಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 14 ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ. ಬೆಳ್ಳಿ ಬೆಲೆಯೂ ಇಳಿಕೆಯಾಗಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಈ ನಡುವೆ ‘ರಿಚ್ ಡ್ಯಾಡ್, ಪೂರ್ ಡ್ಯಾಡ್’ ಪುಸ್ತಕದ ಲೇಖಕ ಹಾಗೂ ಖ್ಯಾತ ಹೂಡಿಕೆದಾರ ರಾಬರ್ಟ್ ಕಿಯೋಸಾಕಿ ಚಿನ್ನದ ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದಾರೆ.
ಚಿನ್ನದ ಬೆಲೆ ಇಳಿಕೆಯಾಗಿರುವುದರಿಂದ ಈಗ ಖರೀದಿಗೆ ಇದು ಸೂಕ್ತ ಸಮಯ ಎಂದು ಕೆಲವರು ಅಭಿಪ್ರಾಯಪಡುತ್ತಿದ್ದಾರೆ. ಆದರೆ ಕಿಯೋಸಾಕಿ ಮಾತ್ರ ಮಾರುಕಟ್ಟೆಯ ಮತ್ತಷ್ಟು ಕುಸಿತಕ್ಕಾಗಿ ಕಾಯುತ್ತಿದ್ದಾರೆ. ಅವರ ಪ್ರಕಾರ, ಸಾಮಾನ್ಯ ಹೂಡಿಕೆದಾರರು ಭಯದಿಂದ ಚಿನ್ನ ಮತ್ತು ಬೆಳ್ಳಿಯನ್ನು ಮಾರಾಟ ಮಾಡುತ್ತಿದ್ದರೆ, ಅನುಭವಿ ಹೂಡಿಕೆದಾರರು ಕಡಿಮೆ ಬೆಲೆಗೆ ಖರೀದಿಸಲು ಅವಕಾಶ ಹುಡುಕುತ್ತಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಕಿಯೋಸಾಕಿ, ಚಿನ್ನ, ಬೆಳ್ಳಿ ಮತ್ತು ಬಿಟ್‌ಕಾಯಿನ್ ಬೆಲೆಗಳು ಕುಸಿಯುತ್ತಿವೆ. ದುರ್ಬಲ ಹೂಡಿಕೆದಾರರು ಮಾರಾಟ ಮಾಡುತ್ತಿದ್ದರೆ, ಬಲಿಷ್ಠ ಹೂಡಿಕೆದಾರರು ಖರೀದಿಸಲು ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಬೆಲೆ ಕುಸಿತದಲ್ಲಿ ಹೂಡಿಕೆ ಅವಕಾಶಗಳನ್ನು ಹುಡುಕುತ್ತಿರುವುದಾಗಿ ತಿಳಿಸಿರುವ ಅವರು, ವಿಶೇಷವಾಗಿ ಬಿಟ್‌ಕಾಯಿನ್‌ನಲ್ಲಿ ತಮ್ಮ ಹೂಡಿಕೆಯನ್ನು ಹೆಚ್ಚಿಸಲು ಆಸಕ್ತಿ ಹೊಂದಿರುವುದಾಗಿ ಹೇಳಿದ್ದಾರೆ.
ಅಂತರರಾಷ್ಟ್ರೀಯ ಹಾಗೂ ದೇಶೀಯ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಲು ಹಲವು ಕಾರಣಗಳಿವೆ. ನವೆಂಬರ್ 20ರಂದು ಸಿಂಗಾಪುರದ ಸ್ಪಾಟ್ ಗೋಲ್ಡ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇಕಡಾ 2.3ರಷ್ಟು ಕುಸಿದು, ಪ್ರತಿ ಔನ್ಸ್‌ಗೆ 3,543.19 ಡಾಲರ್‌ಗೆ ತಲುಪಿತ್ತು. ಇದು ಸೆಪ್ಟೆಂಬರ್ 2025ರ ಬಳಿಕ ದಾಖಲಾದ ಕನಿಷ್ಠ ಮಟ್ಟವಾಗಿದೆ.









