ಸಮಗ್ರ ನ್ಯೂಸ್: ಮಂಗಳೂರು ಸಮೀಪದ ಪಂಜಿಮೊಗರು ಉರುದಾಂಡಿ ಗುಡ್ಡೆ ನಿವಾಸಿ ಕಲಂದರ್ ಅವರಿಗೆ ಸೇರಿದ ಆರು ದನಗಳನ್ನು ಎರಡು ದಿನಗಳ ಅಂತರದಲ್ಲಿ ಯಾರೋ ಕಳವು ಮಾಡಿರುವ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳವಾದ ದನಗಳ ಮೌಲ್ಯ ಸುಮಾರು 2 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ.
ಅಧ್ಯಾಪಕ ವೃತ್ತಿ ಮಾಡಿಕೊಂಡಿರುವ ಕಲಂದರ್ ಅವರು 13 ದನಗಳನ್ನು ಸಾಕಿಕೊಂಡು ಪಶುಸಂಗೋಪನೆಯಲ್ಲಿಯೂ ತೊಡಗಿಸಿಕೊಂಡಿದ್ದರು. ನ.12ರಂದು ರಾತ್ರಿ ಎಲ್ಲ ದನಗಳನ್ನು ಮನೆಯ ಕಂಪೌಂಡ್ ಒಳಗೆ ಕೂಡಿ ಹಾಕಿದ್ದರು.
ನ.13ರಂದು ಮುಂಜಾನೆ ಎದ್ದು ನೋಡಿದಾಗ ಎರಡು ದನಗಳು ನಾಪತ್ತೆಯಾಗಿದ್ದವು. ನ.13ರಂದು ರಾತ್ರಿ ಉಳಿದ ದನಗಳನ್ನು ಮತ್ತೆ ಕಂಪೌಂಡ್ ಒಳಗೆ ಕೂಡಿ ಹಾಕಿದ್ದರು. ನ.14ರಂದು ಮುಂಜಾನೆ ಪರಿಶೀಲಿಸಿದಾಗ ಮತ್ತೆ ನಾಲ್ಕು ದನಗಳು ಕಳವಾಗಿರುವುದು ಕಂಡುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.









