ಸಮಗ್ರ ನ್ಯೂಸ್: ಕಬ್ಬಿಣದ ರಾಡ್‌ನಿಂದ ಹೊಡೆದು ಮಹಿಳೆಯ ಕೊಲೆ ಮಾಡಲು ಪ್ರಯತ್ನಿಸಿದ ಆರೋಪದ ಮೇರೆಗೆ ಕಡಬ ತಾಲ್ಲೂಕು ಕೊಣಾಜೆ ಗ್ರಾಮದ ಪ್ರಸಾದ್‌ನನ್ನು ಸುಬ್ರಹ್ಮಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಮಹಿಳೆಗೂ ಪ್ರಸಾದ್‌ನಿಗೂ ಮೂರು ವರ್ಷಗಳಿಂದ ಪರಿಚಯವಿದ್ದು ಗೆಳೆತನವಿತ್ತು. ನ.4ರಂದು ಸಂಜೆ ಮಹಿಳೆಯನ್ನು ಉಪ್ಪಿನಂಗಡಿಯಿಂದ ಕಾರಿನಲ್ಲಿ ಕರೆದುಕೊಂಡು ಕುಲ್ಕುಂದ ಮೂಲಕ ಬಿಸಿಲೆ ಘಾಟ್ ಕಡೆಗೆ ಹೋದ ಪ್ರಸಾದ್ ದಾರಿಮಧ್ಯೆ ಮಹಿಳೆಯ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾನೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಜ್ಞೆ ತಪ್ಪಿ ಕಾಡಿನೊಳಗೆ ಬಿದ್ದ ಮಹಿಳೆಗೆ ಮರುದಿನ ಬೆಳಿಗ್ಗೆ ಪ್ರಜ್ಞೆ ಮರಳಿ ಬಂದಿದೆ. ನಂತರ ಸುಬ್ರಹ್ಮಣ್ಯಕ್ಕೆ ತೆರಳಿ ದೂರು ನೀಡಿದ್ದಾರೆ. ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಹಾಸನ ಜಿಲ್ಲೆಯ ಯೆಸ್ಲೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಾರಣ ಪ್ರಕರಣವನ್ನು ಅಲ್ಲಿನ ಠಾಣೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.








