ಸಮಗ್ರ ನ್ಯೂಸ್: ಹಾಲಿನ ದರ ಏರಿಕೆಯ ಬೆನ್ನಲ್ಲೇ ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ರಾಜ್ಯದಲ್ಲಿ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗಿದ್ದು, ಕೆಎಸ್ಆರ್ಟಿಸಿ ಬಸ್ಗಳ ಪ್ರಯಾಣ ದರ ಗರಿಷ್ಠ ₹9ರಷ್ಟು ಏರಿಕೆಯಾಗಿದೆ. ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಬಸ್ ಪ್ರಯಾಣ ದರದಲ್ಲೂ ಹೆಚ್ಚಳ ಮಾಡಲಾಗಿದೆ.
ಬಿಎಂಟಿಸಿ ಸಾಮಾನ್ಯ ಬಸ್ಗಳ ಟಿಕೆಟ್ ದರವನ್ನೂ ಹೆಚ್ಚಿಸಲಾಗಿದೆ. ಈ ಹಿಂದೆ ಪ್ರತಿ ಸ್ಟೇಜ್ಗೆ ₹6 ಇದ್ದ ಕನಿಷ್ಠ ಟಿಕೆಟ್ ದರವನ್ನು ₹10ಕ್ಕೆ ಏರಿಕೆ ಮಾಡಲಾಗಿದೆ. ವಾಯುವಜ್ರ ಬಸ್ಗಳ ಕೊನೆಯ ಹಂತದ ಪ್ರಯಾಣ ದರವನ್ನು ₹75ರಿಂದ ₹90ಕ್ಕೆ ಹೆಚ್ಚಿಸಲಾಗಿದೆ.
ರಾಜ್ಯದಲ್ಲಿ ಡೀಸೆಲ್ ಬೆಲೆ ಹಾಗೂ ಸಿಬ್ಬಂದಿ ವೆಚ್ಚ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣ ದರ ಪರಿಷ್ಕರಣೆಗೆ ನಾಲ್ಕು ಸಾರಿಗೆ ನಿಗಮಗಳಿಗೆ ಸರ್ಕಾರ ಈ ಹಿಂದೆಯೇ ಅವಕಾಶ ನೀಡಿತ್ತು. ಕಳೆದ 10 ವರ್ಷಗಳಲ್ಲಿ ಒಂದೇ ಬಾರಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಲಾಗಿದೆ. ಆದರೆ ವಿರೋಧ ಪಕ್ಷಗಳು ಈ ವಿಚಾರದಲ್ಲಿ ಸುಳ್ಳು ಆರೋಪ ಮಾಡುತ್ತಿವೆ ಎಂದು ಸಚಿವ ಬೈರತಿ ಸುರೇಶ್ ಸ್ಪಷ್ಟಪಡಿಸಿದರು.
2021ರಲ್ಲಿ ಎಂ.ಆರ್. ಶ್ರೀನಿವಾಸ ಮೂರ್ತಿ ನೇತೃತ್ವದಲ್ಲಿ ಆರ್ಥಿಕ ಸ್ವಾವಲಂಬನೆ ಹಾಗೂ ಸಂಪನ್ಮೂಲ ಕ್ರೋಡೀಕರಣದ ಕುರಿತು ಅಧ್ಯಯನ ನಡೆಸಲು ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ಪ್ರಯಾಣ ದರ ಹೆಚ್ಚಳ ಸೇರಿದಂತೆ ಹಲವು ಶಿಫಾರಸುಗಳನ್ನು ಮಾಡಿತ್ತು. ಆದರೆ ಸಾರಿಗೆ ನಿಗಮಗಳಲ್ಲಿ ಈ ಬಗ್ಗೆ ನಿರ್ಧಾರ ಕೈಗೊಂಡಿರಲಿಲ್ಲ. ನಂತರ 2026ರಲ್ಲಿ ಸಾರ್ವಜನಿಕ ಸಾರಿಗೆ ದರ ನಿಯಂತ್ರಣ ಸಮಿತಿಯನ್ನು ಅತುಲ್ ಕುಮಾರ್ ತಿವಾರಿ ನೇತೃತ್ವದಲ್ಲಿ ರಚಿಸಲಾಗಿತ್ತು.
ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಬೈರತಿ ಸುರೇಶ್ ಅವರು, ಪ್ರಯಾಣ ದರ ಏರಿಕೆ ಕುರಿತು ವಿವರಗಳನ್ನು ನೀಡಿದ್ದಾರೆ.









