ಸಮಗ್ರ ನ್ಯೂಸ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದಲ್ಲಿ ಶುಕ್ರವಾರದಂದು ಭಾರೀ ದುರಂತವೊಂದು ಸಂಭವಿಸಿದೆ. ಪೈಲಟ್ ಸೇರಿದಂತೆ ಐದು ಮಂದಿ ಕನ್ನಡಿಗರನ್ನು ಹೊತ್ತೊಯ್ಯುತ್ತಿದ್ದ ಟ್ರಾನ್ಸ್ ಭಾರತ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ಹೆಲಿಕಾಪ್ಟರ್ ಪತನಗೊಂಡಿದೆ. ಈ ಅಪಘಾತವು ಪಾಂಡುಕೇಶ್ವರ ಗ್ರಾಮದ ಮೇಲ್ಭಾಗದಲ್ಲಿ ಸಂಭವಿಸಿದ್ದು, ಹೆಲಿಕಾಪ್ಟರ್ ದುರಂತಕ್ಕೆ ಅಸಲಿ ಕಾರಣವೇನು? ಕೊನೆ ಕ್ಷಣದಲ್ಲಿ ಆಗಿದ್ದೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರದ ಮಾಹಿತಿಯ ಪ್ರಕಾರ, ಹೆಲಿಕಾಪ್ಟರ್ ಮಧ್ಯಾಹ್ನ 1:14 ರ ಸುಮಾರಿಗೆ ಬದ್ರಿನಾಥ ಧಾಮದಿಂದ ಡೆಹ್ರಾಡೂನ್‌ನ ಸಹಸ್ತ್ರಧಾರಕ್ಕೆ ಹೊರಟಿತ್ತು. ಜೋಶಿಮಠ ಕಣಿವೆಯ ಮೇಲೆ ಹಾರಾಟ ನಡೆಸುತ್ತಿದ್ದಾಗ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್‌ನ ಸಂಪರ್ಕವು ಹಠಾತ್ ಕಡಿತಗೊಂಡಿತು. ಬಳಿಕ ಟ್ರ್ಯಾಕಿಂಗ್ ಸಿಸ್ಟಮ್‌ನಲ್ಲೂ ಅದರ ಲೊಕೇಶನ್ ಪತ್ತೆಯಾಗಲಿಲ್ಲ.
ಪ್ರಾಥಮಿಕ ವರದಿಗಳ ಪ್ರಕಾರ, ಟೇಕ್‌ಆಫ್ ಆದ ಕೇವಲ 7 ರಿಂದ 8 ನಿಮಿಷಗಳಲ್ಲೇ ಬದ್ರಿ ಕಣಿವೆ ಮತ್ತು ಜೋಶಿಮಠ ಪ್ರದೇಶದ ಮಾರ್ವಾಡಿ ಸೇತುವೆಯ ಮೇಲಿರುವ ಜೆಪಿ ಪವರ್ ಹೌಸ್ ಕಡೆಗಿನ ಗುಡ್ಡಗಾಡು ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದೆ.
ಈ ಹೆಲಿಕಾಪ್ಟರ್‌ನಲ್ಲಿ ಒಟ್ಟು ಪೈಲೆಟ್ ಸೇರಿ ಒಟ್ಟು ಆರು ಮಂದಿ ಪ್ರಯಾಣಿಸುತ್ತಿದ್ದರು. ಕ್ಯಾಪ್ಟನ್ ಹಿಮಾನ್ಶು ಸಭರ್ವಾಲ್. ಬೆಂಗಳೂರಿನಿಂದ ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಸಿಸಿಬಿ ಇನ್ಸ್ಪೆಕ್ಟರ್ ಅರುಣ್ ಸಾಲುಂಕೆ, ಹೆಚ್.ಎಸ್. ನಾಗರಾಜ, ಪ್ರತಾಪ್ ಬಚ್ಚಿಹಳ್ಳಿ ನಿಂಗರಾಜನ್, ಸುಧೀರ್ ಕೆ. ಹಾಗೂ ಶಂಕರಗೌಡ ವಿ.ಬಿ. ಇದ್ದರು. ಆದರೆ, ದುರಾದೃಷ್ಟವಶಾತ್ ಹವಾಮಾನ ವೈಪರಿತ್ಯದಿಂದ ವಿಮಾನ ಪತನಗೊಂಡು ಆರು ಮಂದಿ ದುರ್ಮರಣ ಹೊಂದಿದ್ದಾರೆ.
ಇನ್ನು, ಈ ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳೀಯ ಆಡಳಿತ, ಪೊಲೀಸ್, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಭಾರತೀಯ ಸೇನೆ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀನ್ನ ಜಂಟಿ ತಂಡಗಳು ತಕ್ಷಣವೇ ಕಾರ್ಯಾಚರಣೆಗೆ ಇಳಿದವು. ಎಲ್ಲಾ ರಕ್ಷಣಾ ತಂಡಗಳು ಸಂಪೂರ್ಣ ಸನ್ನದ್ಧತೆಯೊಂದಿಗೆ ಅಪಘಾತ ಸ್ಥಳದತ್ತ ತೆರಳಿದ್ದು, ದುರ್ಗಮ ಗುಡ್ಡಗಾಡು ಪ್ರದೇಶ ಹಾಗೂ ಕೆಟ್ಟ ಹವಾಮಾನದ ನಡುವೆಯೂ ನಾಪತ್ತೆಯಾಗಿರುವ ಹೆಲಿಕಾಪ್ಟರ್ ಮತ್ತು ಅದರಲ್ಲಿರುವವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪರಿಹಾರ ಮತ್ತು ರಕ್ಷಣಾ ಕಾರ್ಯಗಳಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.









