ಸಮಗ್ರ ನ್ಯೂಸ್: ಕೊಲ್ಕತ್ತಾದ ಚೋರ್ಬಾಗನ್ ಸಾರ್ವಜನಿಕ ದುರ್ಗೋತ್ಸವ ಸಮಿತಿಯ ಪೂಜಾ ಪೆಂಡಾಲ್ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 17 ಜನ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದಾರೆ. ದುರ್ಗಾ ಪೂಜಾ ಪೆಂಡಾಲ್ನಲ್ಲಿ ವಿಪರೀತ ಜನದಟ್ಟಣೆಯಿಂದ ಅದು ಕುಸಿದಿದ್ದು, ಭಕ್ತರಲ್ಲಿ ಆತಂಕ ಉಂಟಾಗಿ, ನೂಕುನುಗ್ಗಲು ಸಂಭವಿಸಿದ ಪರಿಣಾಮವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.
ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಸ್ಥಿತಿ ವಿಚಾರಿಸಿದರು.
ಈ ದುರ್ಘಟನೆಯ ಕುರಿತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತೀವ್ರ ಆಘಾತ ಮತ್ತು ಬೇಸರ ವ್ಯಕ್ತಪಡಿಸಿದ್ದಾರೆ. ‘ಚೋರ್ಬಾಗನ್ ಪೂಜಾ ಪೆಂಡಾಲ್ನಲ್ಲಿ ನಡೆದ ಕಾಲ್ತುಳಿತದ ಘಟನೆಯು ನನಗೆ ತೀವ್ರ ಆಘಾತ ಹಾಗೂ ದುಃಖವನ್ನುಂಟು ಮಾಡಿದೆ’ ಎಂದು ಅವರು ತಿಳಿಸಿದ್ದಾರೆ.









