ಸಮಗ್ರ ನ್ಯೂಸ್: ದೇಶಾದ್ಯಂತ ಇದೀಗ ಚುನಾವಣಾ ಆಯೋಗ, ಗ್ಯಾನೇಶ್ ಕುಮಾರ್ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ(SIR) ಭಾರಿ ಕೋಲಾಹಲ ಸೃಷ್ಟಿಸಿದೆ.ಈ ಕುರಿತು ಎದ್ದಿರುವ ಅಪಪ್ರಚಾರ ಮತ್ತು ಕಾನೂನಾತ್ಮಕ ಗೊಂದಲಗಳಿಗೆ ಚುನಾವಣಾ ಆಯೋಗವು ಸ್ಪಷ್ಟನೆ ನೀಡಿದೆ. ಇದೇ ವೇಳೆ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅಮಾನತು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ.
ಸೆಪ್ಟೆಂಬರ್ 26, 2026 ರ ಪತ್ರಿಕಾ ಪ್ರಕಟಣೆಯಲ್ಲಿ ಚುನಾವಣಾ ಆಯೋಗವು SIR ಗಾಗಿ ಫಾರ್ಮ್ 6 ರೊಂದಿಗೆ ಲಗತ್ತಿಸಲಾದ ಡಿಕ್ಲರೇಶನ್ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ ಎಂದು ತಿಳಿಸಿತ್ತು. ಈ ಕುರಿತು ಹಲವು ಆರೋಪಗಳು ಕೇಳಿಬಂದಿದೆ. ಮಾಹಿತಿ ತಿರುಚಿದೆ, ತಪ್ಪು ಅನ್ನೋ ಆರೋಪಗಳಿಗೆ ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಿದೆ.
1960 ರ ಮತದಾರರ ನೋಂದಣಿ ನಿಯಮಗಳ ಅಡಿಯಲ್ಲಿ ನಿಗದಿಪಡಿಸಲಾದ ಶಾಸನಬದ್ಧ ‘ಫಾರ್ಮ್ 6’ ರಚನೆ, ವಿಷಯಗಳು ಅಥವಾ ಶಾಸನಬದ್ಧ ಸ್ವರೂಪವನ್ನು ಆಯೋಗವು ಬದಲಾಯಿಸಿಲ್ಲ. SIR ಪ್ರಕ್ರಿಯೆಯ ಸಂದರ್ಭದಲ್ಲಿ ಹೊಸ ಮತದಾರರು ಫಾರ್ಮ್ 6 ರ ಜೊತೆಗೆ ‘ಅನುಬಂಧ D’ (Annexure D) ಅಡಿಯಲ್ಲಿ ಒಂದು ‘ಡಿಕ್ಲರೇಶನ್ ಫಾರ್ಮ್’ ಸಲ್ಲಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಇದು ಫಾರ್ಮ್ನೊಂದಿಗೆ ಲಗತ್ತಿಸುವ ಹೆಚ್ಚುವರಿ ಸಾಕ್ಷ್ಯ ದಾಖಲೆಯೇ (supporting document) ಹೊರತು, ಸ್ವತಃ ಫಾರ್ಮ್ 6 ರ ಮಾರ್ಪಾಡಲ್ಲ. ಫಾರ್ಮ್ ತಿದ್ದುಪಡಿ ಮಾಡುವುದು ಬೇರೆ, ಹೆಚ್ಚುವರಿ ದಾಖಲೆ ಕೋರುವುದು ಬೇರೆ.
ಸಾಮಾನ್ಯ ಪರಿಷ್ಕರಣೆಗೆ ಫಾರ್ಮ್ 6 ರ ಪ್ರಮಾಣಿತ ದಾಖಲೆ ಚೌಕಟ್ಟು ಸಾಕಾಗಬಹುದಾದರೂ, ಮತದಾರರ ಪಟ್ಟಿ ಪರಿಷ್ಕರಣೆ’ (SIR) ವಿಶೇಷ ಪ್ರಕ್ರಿಯೆಗೆ ಸೂಕ್ತವಾದ ಹೆಚ್ಚುವರಿ ದಾಖಲೆಗಳನ್ನು ಕೋರುವ ಶೇಷ ಅಧಿಕಾರ (residual authority) ಚುನಾವಣಾ ಆಯೋಗಕ್ಕಿದೆ ಎಂಬುದನ್ನು ಸುಪ್ರೀಂ ಕೋರ್ಟ್ (ಬಿಹಾರ SIR ತೀರ್ಪು ಹಾಗೂ ಪ್ಯಾರಾ 152 ರಲ್ಲಿ) ಸ್ಪಷ್ಟವಾಗಿ ಗುರುತಿಸಿದೆ.
ಚುನಾವಣಾ ಆಯೋಗವು ಫಾರ್ಮ್ 6 ರ ‘ತಿದ್ದುಪಡಿ’ಯನ್ನು ಕೋರ್ಟ್ ಒಪ್ಪಿದೆ ಎಂದು ಎಲ್ಲಿಯೂ ಹೇಳಿಲ್ಲ. ಬದಲಾಗಿ ಫಾರ್ಮ್ 6 ಗೆ ಲಗತ್ತಿಸಲಾದ ‘ಡಿಕ್ಲರೇಶನ್’ ಕೋರ್ಟ್ ಎತ್ತಿಹಿಡಿದಿದೆ ಎಂದು ಮಾತ್ರ ಹೇಳಿತ್ತು. ಕೋರ್ಟ್ ‘ಫಾರ್ಮ್ 6 ಮಾರ್ಪಾಡಿಗೆ ಅನುಮೋದನೆ ನೀಡಿಲ್ಲ’ ಎಂಬ ವೀಕ್ಷಣೆಗೂ ಮತ್ತು ‘ಅನುಬಂಧಿತ ಡಿಕ್ಲರೇಶನ್ ಅನ್ನು ಒಪ್ಪಿದೆ’ ಎಂಬ ಆಯೋಗದ ಹೇಳಿಕೆಗೂ ಯಾವುದೇ ವೈರುಧ್ಯವಿಲ್ಲ ಎಂಬುದನ್ನು ಆಯೋಗ ಸ್ಪಷ್ಟಪಡಿಸಿದೆ.
ಸುಳ್ಳು ಆರೋಪಗಳ ಪತನ: ಶಾಸನಬದ್ಧ ಫಾರ್ಮ್ ತಿದ್ದುಪಡಿ ಮಾಡುವುದು ಮತ್ತು ಹೆಚ್ಚುವರಿ ಬೆಂಬಲಿತ ದಾಖಲೆ ಕೋರುವುದರ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಗ್ರಹಿಸಿದರೆ, ಆಯೋಗವು 26 ಸೆಪ್ಟೆಂಬರ್ ಪ್ರಕಟಣೆಯಲ್ಲಿ ಸುಳ್ಳು ಹೇಳಿದೆ ಎನ್ನುವ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಅನ್ನೋದು ಸಾಬೀತಾಗಲಿದೆ ಎಂದು ಆಯೋಗ ಹೇಳಿದೆ.









