ಸಮಗ್ರ ನ್ಯೂಸ್: ನಂದಿನಿ ಹಾಲು ಮತ್ತು ಅದರ ಉತ್ಪನ್ನಗಳ ದರವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲು ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಆದರೆ, ಸದ್ಯ ನೀತಿಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ ಈ ಸಂಬಂಧ ಚುನಾವಣಾ ಆಯೋಗದ ಅನುಮತಿ ಪಡೆದು, ನಂತರವಷ್ಟೇ ತೀರ್ಮಾನ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಅ. 23ರಂದು ಮೇಲ್ಮನೆ ಚುನಾವಣೆ ನಡೆಯಲಿದೆ. ಇದೆಲ್ಲವೂ ಮುಗಿದ ಬಳಿಕವೇ ಅಂದರೆ ಅ.27ರ ಬಳಿಕವೇ ಹಾಲಿನ ದರ ಹೆಚ್ಚಳದ ಬಗ್ಗೆ ಆದೇಶ ಹೊರಡಿಸುವುದು ಸೂಕ್ತ ಎಂಬ ತೀರ್ಮಾನಕ್ಕೂ ಸರ್ಕಾರ ಬಂದಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಹಾಲು ಮತ್ತು ಅದರ ಇತರ ಉತ್ಪನ್ನಗಳ ಮಾರಾಟ ಬೆಲೆಯನ್ನು ಪ್ರತಿ ಲೀಟರ್‌ಗೆ 8ರಿಂದ 10 ರೂ.ವರೆಗೆ ಹೆಚ್ಚಿಸುವ ಪ್ರಸ್ತಾವನೆ ಮಂಗಳವಾರ ನಡೆದ ಸಂಪುಟದ ಮುಂದಿತ್ತು. ಬರದಿಂದ ತತ್ತರಿಸಿರುವ ರೈತರು ಹಾಗೂ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಹಿತದೃಷ್ಟಿಯಿಂದ ಇದರ ಅಗತ್ಯ ಮತ್ತು ಅನಿವಾರ್ಯತೆ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಅಂತಿಮವಾಗಿ ಪ್ರತಿ ಲೀ.ಗೆ 8 ರೂ. ಹೆಚ್ಚಿಸುವುದು ಸೂಕ್ತ ಎಂದು ಅಭಿಪ್ರಾಯಪಡಲಾಯಿತು ಎಂದು ಹೇಳಲಾಗಿದೆ.









